ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಹೃದಯಾಘಾತದಿಂದ ಗಂಡನ ಸಾವಿನ ಸುದ್ದಿ ತಿಳಿದು ಪತ್ನಿಯೂ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ನಡೆದಿದೆ. ಶಶಿಧರ (40) ಮತ್ತು ಸರೋಜಾ (35) ಸಾವಿನಲ್ಲೂ ಒಂದಾದ ದಂಪತಿ.
ಚಿನ್ನದ ಅಂಗಡಿ ನಡೆಸುತ್ತಿದ್ದ ಶಶಿಧರ ಹದಿನೈದು ವರ್ಷಗಳ ಹಿಂದೆ ಸರೋಜಾರನ್ನು ಮದುವೆಯಾಗಿದ್ದ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಶಶಿಧರಗೆ ಹೃದಯಾಘಾತವಾಗಿ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಸು ನೀಗಿದ್ದಾರೆ.
ಮನೆಯಲ್ಲೇ ಇದ್ದ ಪತ್ನಿ ಸರೋಜಾಗೆ ಪತಿ ಮೃತಪಟ್ಟಿರುವ ಸುದ್ದಿ ತಿಳಿದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ಹೃದಯವಿದ್ರಾವಕ ಘಟನೆಯಿಂದ ಬೀಳಗಿ ಪಟ್ಟಣದ ಜನರು ಆಘಾತಗೊಂಡಿದ್ದಾರೆ. ಕುಟುಂಬದವರ ಆಕ್ರಂದನ ಮೇರೆ ಮೀರಿದೆ.
ಉತ್ತರಕನ್ನಡದಲ್ಲಿ ಜನಪ್ರತಿನಿಧಿ ಮಹಿಳೆಯರಿಬ್ಬರು ಹೃದಯಾಘಾತಕ್ಕೆ ಬಲಿ
ಶಿರಸಿ ತಾಲೂಕಿನ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಗೀತಾ ಬೋವಿ ಮತ್ತು ಅಂಕೋಲಾ ತಾಲೂಕಿನ ಭಾವಿಕೇರಿ ಗ್ರಾಮ ಪಂಚಾಯತಿ ಸದಸ್ಯೆ ಸುಮಿತ್ರಾ ಬಂಟ್ ಹಠಾತ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಈ ಇಬ್ಬರು ಮಹಿಳೆಯರು ಸಾಮಾಜಿಕ ಜನ-ಕೇಂದ್ರಿತ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು ಮತ್ತು ಸಾರ್ವಜನಿಕ ಸೇವೆಯಲ್ಲಿ ಮುಂಚೂಣಿಯಲ್ಲಿದ್ದು ಜನರ ಪ್ರೀತಿಗೆ ಪಾತ್ರರಾಗಿದ್ದರು.
ಇವರ ನಿಧನದಿಂದ ಸ್ಥಳೀಯ ರಾಜಕೀಯ ಕಾರ್ಯಕರ್ತರು, ಸಹೋದ್ಯೋಗಿಗಳು ಮತ್ತು ಗ್ರಾಮಸ್ಥರಿಗೆ ತೀವ್ರ ದು:ಖವಾಗಿದ್ದು, ಗೀತಾ ಬೋವಿ ನಿಧನಕ್ಕೆ ಸ್ಥಳೀಯ ಶಾಸಕ ಭೀಮಣ್ಣ ನಾಯಕ್ ಸಂತಾಪ ಸೂಚಿಸಿದರು. ಆ ದಿನ ಕ್ಷೇತ್ರದಲ್ಲಿ ನಿಗದಿಯಾಗಿದ್ದ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಿದರು.


