ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿ ಬೆಂಗಳೂರಿನಲ್ಲಿ ಪತ್ನಿಯನ್ನು ಗುಂಡಿಕ್ಕಿ ಕೊಲೆ ಮಾಡಿದ್ದ ಪತಿ ಬಾಲಮುರುಗನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಕೆಲವು ದಿನಗಳ ಹಿಂದೆ ಮಾಗಡಿ ರಸ್ತೆ, ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ನಡೆದಿದ್ದ ಮಹಿಳೆಯ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಪತಿಯ ಪೂರ್ವಯೋಜಿತ ಮತ್ತು ಕ್ರಿಮಿನಲ್ ಮೈಂಡ್‌ಗೆ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.
ಪತ್ನಿ ಭುವನೇಶ್ವರಿಯನ್ನು ಕೊಲ್ಲುವ ನಿರ್ಧಾರ ಮಾಡಿದ್ದ ಪತಿ ಬಾಲಮುರುಗನ್ ಗನ್ ಖರೀದಿಸಲು ಮೂರು ಬಾರಿ ಬಿಹಾರಕ್ಕೆ ಪ್ರಯಾಣಿಸಿದ್ದ. ಮೊದಲ ಎರಡು ಬಾರಿ ಹಣ ಕಳೆದುಕೊಂಡು ಗನ್ ಸಿಗದೆ ಮೋಸ ಹೋಗಿ ವಾಪಸ್ ಬಂದಿದ್ದ. ಮೂರನೇ ಬಾರಿ ಮತ್ತೆ ಬಿಹಾರಕ್ಕೆ ಹೋಗಿ ಗನ್ ತೋರಿಸಿದ ಬಳಿಕವೇ ಹಣ ನೀಡಿ ಎರಡು ಪಿಸ್ತೂಲ್‌ಗಳನ್ನು ಖರೀದಿಸಿದ್ದ. ಅಲ್ಲೇ 15 ದಿನ ಪಿಸ್ತೂಲ್ ಬಳಸುವ ತರಬೇತಿ ಪಡೆದಿದ್ದ ಎಂಬುದು ತನಿಖೆ ವೇಳೆ ಹೊರಬಂದಿದೆ.
ಒಂದು ಗನ್ ಅನ್ನು ತಮಿಳುನಾಡಿನ ವ್ಯಕ್ತಿಗೆ ನೀಡಿ ಪತ್ನಿ ಕೊಲೆಗೆ ಸುಪಾರಿ ಕೊಟ್ಟಿದ್ದ. 1.25 ಲಕ್ಷ ರೂ. ಹಣ ಪಡೆದ ಸುಪಾರಿ ಕಿಲ್ಲರ್ ಬೆಂಗಳೂರಿನ ಲಾಡ್ಜ್‌ನಲ್ಲಿ ಉಳಿದುಕೊಂಡು ಕೊಲೆ ಮಾಡದೆ ವಾಪಸಾಗಿದ್ದ. ಬಾಲಮುರುಗನ್ ‘ನಾನು ಹಿಂದೆ ಇರ್ತೀನಿ ಬಾ’ ಎಂದು ಸುಪಾರಿ ಕಿಲ್ಲರ್‌ನ ಕರೆದೊಯ್ದರೂ ಗುಂಡು ಹಾರಿಸದೆ ವಾಪಸಾಗಿದ್ದ.
ಸುಪಾರಿ ಕಿಲ್ಲರ್‌ನಿಂದ ಕೆಲಸ ಆಗದಿದ್ದಾಗ, ಬಾಲಮುರುಗನ್ ಎರಡು ಬಾರಿ ಕೊಲೆಗೆ ಯತ್ನಿಸಿ ಧೈರ್ಯ ಸಾಲದೆ ಹಿಂಜರಿದಿದ್ದ. ಮೂರನೇ ಬಾರಿ ಧೈರ್ಯ ಮಾಡಿ ಗುಂಡಿಕ್ಕಿ ಕೊಲೆ ಮಾಡಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಗನ್ ನೀಡಿದವರು ಹಾಗೂ ಸುಪಾರಿ ಪಡೆದವನ ಪತ್ತೆಗೆ ಮಾಗಡಿ ರಸ್ತೆ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.


