ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೆಂಬಲವಾಡ ಗ್ರಾಮದಲ್ಲಿ ಅಕ್ರಮ ಸಂಬಂಧವನ್ನು ಪ್ರಶ್ನಿಸಿದ ಪತ್ನಿಗೆ ಸಾರ್ವಜನಿಕವಾಗಿ ಒದ್ದು ಪತಿ ಹಲ್ಲೆ ಮಾಡುತ್ತಿದ್ದು, ತಡೆಯಲು ಬಂದ ಆಕೆಯ ತಾಯಿ ಮೇಲೂ ದೌರ್ಜನ್ಯ ನಡೆಸುತ್ತಿದ್ದರೂ ಗ್ರಾಮಸ್ಥರು ಮೂಕ ಪ್ರೇಕ್ಷಕರಾಗಿ ನಿಂತಿದ್ದ ಘಟನೆ ನಡೆದಿದೆ.
ದೌರ್ಜನ್ಯಕ್ಕೆ ಒಳಗಾದ ಮಹಿಳೆ ರಾಜಶ್ರೀ ಹೊಸಮನಿ ಐದು ವರ್ಷದ ಹಿಂದೆ ರಾಕೇಶ್ ಹೊಸಮನಿ ಎಂಬಾತನನ್ನು ಮದುವೆಯಾಗಿದ್ದು, ಒಂದು ಹೆಣ್ಣು ಮಗು ಇದೆ. ರಾಕೇಶ್ ಬೇರೊಬ್ಬಳ ಜೊತೆ ಸಂಬಂಧ ಇಟ್ಟುಕೊಂಡಿದ್ದು ಮದುವೆಯಾದ ಕೆಲವೇ ದಿನಗಳಲ್ಲಿ ಬಯಲಾಗಿದೆ. ಮದುವೆಯಾದ ಬಳಿಕವೂ ಆಕೆ ಜೊತೆಗೆ ಸಂಪರ್ಕ ಇಟ್ಟುಕೊಂಡಿದ್ದು ಪತ್ನಿಗೆ ಗೊತ್ತಾಗಿದೆ. ಆಗ ಗಂಡನ ಜೊತೆಗೆ ಜಗಳವಾಡಿದ್ದಾಳೆ, ಹೀಗೆ ಮುಂದುವರಿದರೆ ಸಂಸಾರ ಮಾಡಲು ಆಗಲ್ಲ ಎಂದಿದ್ದಾಳೆ. ಹಿರಿಯರು ಆಕೆಯ ಮನವೊಲಿಸಿ ಮತ್ತೆ ಗಂಡನೊಟ್ಟಿಗೆ ಸಂಸಾರ ನಡೆಸುವಂತೆ ಮಾಡಿದ್ದಾರೆ. ಬಳಿಕವೂ ಗಂಡ ಬದಲಾಗಲಿಲ್ಲ ಎಂದು ಆರೋಪಿಸಿರುವ ರಾಜಶ್ರೀ ವರದಕ್ಷಿಣೆ ಕಿರುಕುಳದ ಬಗ್ಗೆಯೂ ದೂರಿ ತವರು ಮನೆ ಸೇರಿದ್ದರು.
ದೀಪಾವಳಿ ಹಿಂದಿನ ಅತ್ತೆ ಮಾವ ಕರೆ ಮಾಡಿ, ‘ಮನೆಗೆ ಬಾ, ದೀಪಾವಳಿ ಹಬ್ಬ ಆಚರಿಸೋಣ’ ಎಂದಿದ್ದಾರೆ. ಹೀಗೆ ಬಂದಾಕೆ ತನ್ನ ಗಂಡ ಸರಿಯಿಲ್ಲ ಎಂದಿದ್ದಾಳೆ. ಇದೇ ವಿಚಾರಕ್ಕೆ ಅತ್ತೆ-ಸೊಸೆ ನಡುವೆ ವಾಗ್ವಾದ ನಡೆದಿದೆ. ಆಗ ಗಂಡ ಮತ್ತು ಸಹೋದರ ಸೇರಿಕೊಂಡು ರಾಜಶ್ರೀ ಮೇಲೆ ಹಲ್ಲೆ ಮಾಡಿದ್ದಾರೆ.
ಗ್ರಾಮದ ರಸ್ತೆಯಲ್ಲಿ ಮಹಿಳೆಯರಿಬ್ಬರ ಮೇಲೆ ಮನೆ ಮಂದಿ ಎಲ್ಲಾ ಸೇರಿಕೊಂಡು ಹಲ್ಲೆ ಮಾಡುತ್ತಿದ್ದರೂ ಯಾರೂ ಸಹಾಯಕ್ಕೆ ಬಂದಿಲ್ಲ. ಕಾಲಿನಿಂದ ಒದ್ದು, ಮುಖ ಸೇರಿದಂತೆ ಎಲ್ಲೆಂದರಲ್ಲಿ ಹೊಡೆದಿದ್ದಾರೆ. ರಾಜಶ್ರೀಯನ್ನು ಬಿಡಿಸಲು ಬಂದ ಅವರ ತಾಯಿ ಮೇಲೆ ಕೂಡ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ಗೋಕಾಕ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಸಂತ್ರಸ್ತ ರಾಜಶ್ರೀ ಹಾಗೂ ಕುಟುಂಬಸ್ಥರು, ಹಲ್ಲೆ ಮಾಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಗುಂಪು ಕಟ್ಟಿಕೊಂಡು ಬಂದು ಹಲ್ಲೆ ಮಾಡಿ ಕಲ್ಲು ತೂರಾಟ ಕೂಡ ನಡೆಸಿದ್ದಾರೆ ಎಂದು ರಾಕೇಶ್ ಪ್ರತ್ಯಾರೋಪ ಮಾಡಿದ್ದಾರೆ. ಚಿಕ್ಕೋಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ಯತ್ನ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


