ಬೆಂಗಳೂರಿನ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಿಟ್ಟಗಾನಹಳ್ಳಿ ಬಳಿ ವ್ಯಕ್ತಿಯೊಬ್ಬ ಪತ್ನಿಯನ್ನು ಹತ್ಯೆ ಮಾಡಿ ಅಪಘಾತದಿಂದ ಮೃತಪಟ್ಟಿರುವುದಾಗಿ ಬಿಂಬಿಸಲು ಪ್ರಯತ್ನಿಸಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಹತ್ಯೆ ನಡೆಸಿದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಯಲಹಂಕದ ಬೊಮ್ಮಸಂದ್ರದ ನಿವಾಸಿ ಅನಂತ್ (64) ಎಂಬಾತ ಪತ್ನಿ ಗಾಯತ್ರಿ (50) ಅವರನ್ನು ಸೈಟ್ ನೋಡಲೆಂದು ಕರೆದುಕೊಂಡು ಹೋಗಿದ್ದಾನೆ. ಸೈಟ್ನಲ್ಲಿ ಪತ್ನಿಯ ತಲೆ ಮೇಲೆ ಕಲ್ಲು ಎತ್ತಿಹಾಕಿದ್ದಾನೆ. ನಂತರ ಗಾಯತ್ರಿ ಅಪಘಾತಕ್ಕೆ ಒಳಗಾಗಿದ್ದಾರೆ ಎಂದು ನಾಟಕವಾಡಿ ಅಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಅಲ್ಲಿ ಆಕೆ ಮೃತಪಟ್ಟಿದ್ದಾರೆ.
ಚಿಕ್ಕಜಾಲ ಟ್ರಾಫಿಕ್ ಸಬ್ ಇನ್ಸ್‌ಪೆಕ್ಟರ್ ಆಸ್ಪತ್ರೆಗೆ ತೆರಳಿ ಪರಿಶೀಲನೆ ನಡೆಸಿದಾಗ ಅಪಘಾತವಲ್ಲ ಎಂಬುದು ಅರಿವಿಗೆ ಬಂದಿದೆ. ಅನುಮಾನಾಸ್ಪದ ಸ್ಥಿತಿಯಲ್ಲಿ ಮೃತಪಟ್ಟಿದ್ದ ಗಾಯತ್ರಿಯ ಗಾಯಗಳನ್ನು ಪರಿಶೀಲಿಸಿ ತನಿಖೆ ನಡೆಸಿದಾಗ ಕೊಲೆ ಎಂಬುದು ದೃಢಪಟ್ಟಿದೆ. ಬಾಗಲೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಯು ಪತ್ನಿಯ ಕೊಲೆ ಮಾಡಲು ಕಾರಣವೇನು ಎಂಬುದರ ಬಗ್ಗೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ಪ್ರಿಯಕರನ ಜೊತೆ ಸೇರಿ ಗಂಡನ ಕೊಂದು ಹೃದಯಾಘಾತವೆಂದ ಪತ್ನಿ ಬಂಧನ
ಹೈದರಾಬಾದ್‌ನಲ್ಲಿ ಪ್ರಿಯಕರನ ಜತೆ ಸೇರಿ ಪತಿಯನ್ನು ಕೊಂದ ಮಹಿಳೆ ಹೃದಯಾಘಾತದಿಂದ ಶೌಚಾಲಯದಲ್ಲಿ ಕುಸಿದುಬಿದ್ದು ಗಂಡ ಮೃತಪಟ್ಟಿದ್ದಾಗಿ ಕಥೆ ಕಟ್ಟಿ ಪೊಲೀಸರಿಗೆ ಸಿಕ್ಕಿ ಹಾಕಿಕೊಂಡಿದ್ದಾಳೆ. ಪತಿ ಖಾಸಗಿ ವಿಶ್ವವಿದ್ಯಾಲಯವೊಂದರಲ್ಲಿ ಲಾಜಿಸ್ಟಿಕ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಬೋಡುಪ್ಪಲ್ನಲ್ಲಿರುವ ನಿವಾಸದಲ್ಲಿ ಪತ್ನಿ ಹಾಗೂ ಆಕೆಯ ಪ್ರಿಯಕರ ಸೇರಿ ಕೊಲೆ ಮಾಡಿದ್ದರು ಎಂದು ರಾಚಕೊಂಡ ಪೊಲೀಸರು ತಿಳಿಸಿದ್ದಾರೆ.
ಹೃದಯಾಘಾತದಿಂದಮೃತಪಟ್ಟಿದ್ದಾಗಿ ಹೇಳಿ ಮಹಿಲೆ ಸಂಬಂಧಿಕರನ್ನು ನಂಬಿಸಿದ್ದಳು. ತನಿಖೆಯ ಸಮಯದಲ್ಲಿ ಮೃತ ದೇಹದ ಮೇಲೆ ಅನುಮಾನಾಸ್ಪದ ಗಾಯಗಳು ಕಂಡುಬಂದಿದ್ದು, ಪೊಲೀಸರಲ್ಲಿ ಈ ಸಾವಿನ ಬಗ್ಗೆ ಕೆಲವು ಅನುಮಾನಗಳನ್ನು ಹುಟ್ಟುಹಾಕಿತ್ತು. ಸಿಸಿಟಿವಿ ದೃಶ್ಯಾವಳಿ ಆಧಾರದಲ್ಲಿ ಮಹಿಳೆ ಮತ್ತು ಪ್ರಿಯಕರನನ್ನು ಬಂಧಿಸಲಾಗಿದೆ.
ಮಹಿಳೆಯ ಪತಿ ಪ್ರಿಯಕರನೊಂದಿಗಿನ ಸಂಬಂಧದ ಬಗ್ಗೆ ಅನುಮಾನಗೊಂಡು ಆಕೆಯನ್ನು ಪ್ರಶ್ನಿಸಲು ಪ್ರಾರಂಭಿಸಿದ್ದ, ಹೀಗಾಗಿ ಪ್ರಿಯಕರನ ಜತೆ ಸೇರಿ ಪತಿಯನ್ನು ಕೊಲ್ಲಲು ಸಂಚು ರೂಪಿಸಿದ್ದಾಗಿ ಆಕೆ ಒಪ್ಪಿಕೊಂಡಿದ್ದಾಳೆ.


