ಬೆಂಗಳೂರಿನಲ್ಲಿ ಬೃಹತ್ ಡ್ರಗ್ ಜಾಲವೊಂದನ್ನು ಅಮೃತಹಳ್ಳಿ ಪೊಲೀಸರು ಭೇದಿಸಿದ್ದಾರೆ. ಕೇರಳ ಮೂಲದ 7 ಡ್ರಗ್ ಪೆಡ್ಲರ್ಸ್ ಸೇರಿದಂತೆ ಹತ್ತು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತರಿಂದ ನಾಲ್ಕು ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಥೈಲ್ಯಾಂಡ್‌ನಿಂದ ವಿಮಾನದ ಮೂಲಕ ಡ್ರಗ್ಸ್ ತರಿಸಿಕೊಂಡು ಡಾರ್ಕ್‌ವೆಬ್ ಮೂಲಕ ಮಾರಾ ಜಾಲ ನಿರ್ವಹಿಸುತ್ತಿದ್ದರು.
ಬಂಧಿತ ಆರೋಪಿಗಳನ್ನು ಕುಶಾಲ್, ಸಾಗರ್, ಶಶಾಂಕ್, ವಿಲ್ಸನ್, ಆಶೀರ್ ಅಲಿ, ಸಜ್ಜದ್, ರಿಯಾಜ್, ಶಿಯಾಬ್, ನಿಸಾರ್ ಮತ್ತು ಅಭಿನವ್ ಎಂದು ಗುರುತಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಬಂಧಿತ ಡ್ರಗ್ ಪೆಡ್ಲರ್ಗಳಲ್ಲಿ ಇಬ್ಬರು ಕರ್ನಾಟಕ, ಒಬ್ಬ ಆಂಧ್ರ, ಉಳಿದ ಏಳು ಜನ ಕೇರಳದವರಾಗಿದ್ದಾರೆ.
ಆರೋಪಿಗಳು ಥೈಲ್ಯಾಂಡ್‌ನಿಂದ ಡ್ರಗ್ಸ್ ತರಿಸಿಕೊಳ್ಳುತ್ತಿದ್ದರು. ಅದೇ ರೀತಿ ಬೇಕಿದ್ದವರು ಡಾರ್ಕ್‌ವೆಬ್‌ನಲ್ಲಿ ‘ಟೀಂ ಕಲ್ಕಿ’ ವೆಬ್‌ಸೈಟ್ ಮೂಲಕ ಡ್ರಗ್ಸ್‌ಗಾಗಿ ಆರ್ಡರ್ ಮಾಡುತ್ತಿದ್ದರು. ಥೈಲ್ಯಾಂಡ್‌ನಲ್ಲಿರುವ ಕೇರಳದ ವ್ಯಕ್ತಿವಿಮಾನದ ಮೂಲಕ ಬೆಂಗಳೂರಿಗೆ ಡ್ರಗ್ಸ್ ಕಳುಹಿಸುತ್ತಿದ್ದ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ.
ಕಾಲೇಜು ವಿದ್ಯಾರ್ಥಿಗಳು, ಐಟಿ-ಬಿಟಿ ಉದ್ಯೋಗಿಗಳೇ ಮುಖ್ಯ ಗ್ರಾಹಕರು, ಯಲಹಂಕ, ಹೆಬ್ಬಾಳ, ಕೋರಮಂಗಲ, ಬೆಳ್ಳಂದೂರು ಸೇರಿದಂತೆ ಹಲವೆಡೆ ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಡ್ರಗ್ ಪೆಡ್ಲರ್‌ಗಳು ಒಂದೇ ತಂಡವಾಗಿದ್ದರೂ ವ್ಯಾಪ್ತಿಯನ್ನು ಬಿಟ್ಟು ಬೇರೆ ಪ್ರದೇಶದಲ್ಲಿ ಡ್ರಗ್ಸ್ ಮಾರಾಟಕ್ಕೆ ಹೋದ ಪೆಡ್ಲರ್‌ನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೆ, ಕೆಲವೊಮ್ಮೆ ಕೊಲೆ ಮಾಡುವ ಹಂತದವರೆಗೆ ಜಗಳ ತಲುಪಿತ್ತು ಎಂದು ಪೊಲೀಸರು ಹೇಳಿದ್ದಾರೆ.
3 ಕೆಜಿ ಹೈಡ್ರೋ ಗಾಂಜಾ, 500 ಎಲ್‌ಎಸ್‌ಡಿ ಸ್ಟ್ರಿಪ್ಸ್, 10 ಕೆಜಿ ಗಾಂಜಾ, ಕೃತ್ಯಕ್ಕೆ ಬಳಸಿದ್ದ ಎರಡು ಕಾರು ಮತ್ತು 10 ಮೊಬೈಲ್ ಫೋನ್‌ಗಳನ್ನು ಬಂಧಿತರಿಂದ ವಶಪಡಿಸಿಕೊಳ್ಳಲಾಗಿದೆ. ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಮುಖ್ಯ ಆರೋಪಿ ನಾಪತ್ತೆ ಯಾಗಿದ್ದು, ಅಮೃತಹಳ್ಳಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಪ್ರತ್ಯೇಕ ಪ್ರಕರಣದಲ್ಲಿ ತಲಘಟ್ಟಪುರ ಪೊಲೀಸರು ಕಾರ್ಯಾಚರಣೆ 60 ಲಕ್ಷ ರೂ. ಮೌಲ್ಯದ 78 ಕೆಜೆ ಗಾಂಜಾ ವಶಕ್ಕೆ ಪಡೆದಿದ್ದಾರೆ.


