ಹುಬ್ಬಳ್ಳಿ ಮೂಲದ ಗುತ್ತಿಗೆದಾರ ಹಾಗೂ ಹೋಟೆಲ್ ಉದ್ಯಮಿ ಆನಂದ ಉಮೇಶ್ ಹೆಗಡೆ (40) ಎಂಬವರು ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಪಟ್ಟಣದ ದಾಕ್ಷಾಯಿಣಿ ಲಾಡ್ಜ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆನಂದ ಹುಬ್ಬಳ್ಳಿಯ ಭವಾನಿ ನಗರದ ನಿವಾಸಿಯಾಗಿದ್ದು, ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ. ಅವರುಟೆಂಡರ್ ಸಂಬಂಧಿತ ಕೆಲಸಕ್ಕಾಗಿ ಹುಬ್ಬಳ್ಳಿಯಿಂದ ಹೂವಿನಹಡಗಲಿ ಪಟ್ಟಣಕ್ಕೆ ಆಗಮಿಸಿದ್ದರು. ದಾಕ್ಷಾಯಿಣಿ ಲಾಡ್ಜ್‌ನ 17ನೇ ಕೊಠಡಿಯ ತಂಗಿದ್ದ ಅವರು ರಾತ್ರಿ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸೋಮವಾರ ಬೆಳಿಗ್ಗೆ ಆನಂದ ಅವರಿಗೆ ಕುಟುಂಬದವರು ಸಾಕಷ್ಟು ಬಾರಿ ಕರೆ ಮಾಡಿದ್ದರು. ಕರೆ ಸ್ವೀಕರಿಸದ ಕಾರಣ ಲಾಡ್ಜ್ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.
ಲಾಡ್ಜ್ ಸಿಬ್ಬಂದಿ ಕೊಠಡಿ ಬಾಗಿಲು ತೆರೆದಾಗ, ಕಿಟಕಿಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಹೂವಿನಹಡಗಲಿ ಪೊಲೀಸ್ ಠಾಣೆಯ ಸಿಬ್ಬಂದಿ ಧಾವಿಸಿ ಪರಿಶೀಲನೆ ನಡೆಸಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಹೂವಿನಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆನಂದ ಹೆಗಡೆ ಹೂವಿನಹಡಗಲಿಯ ತಾಲೂಕು ಕ್ರೀಡಾಂಗಣ ಅಭಿವೃದ್ಧಿ ಮತ್ತು ನವೀಕರಣ ಕಾಮಗಾರಿಯ ಗುತ್ತಿಗೆ ಪಡೆದಿದ್ದರು. ಸ್ನೇಹಿತರಾದ ಸುಧೀಂದ್ರ ಹಾಗೂ ಗೌರೀಶ ಅವರೊಂದಿಗೆ ಪಾಲುದಾರಿಕೆಯಲ್ಲಿ ಕಂಪನಿ ಸ್ಥಾಪಿಸಿ ಟೆಂಡರ್ ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದರು.


