ಎಸ್ಐಟಿ ತನಿಖೆ ನಡೆಸುತ್ತಿರುವ ಧರ್ಮಸ್ಥಳ ಪ್ರಕರಣ ಸಂಬಂಧ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಪ್ರವೇಶಿಸಿದ್ದು, ಆಯೋಗವು ತನಿಖೆ ಮೇಲ್ವಿಚಾರಣೆ, ಹಕ್ಕು ಉಲ್ಲಂಘನೆ ಪರಿಶೀಲನೆ ಹಾಗೂ ವರದಿ ಸಿದ್ಧಪಡಿಸುವ ಅವಕಾಶವಿರುತ್ತದೆ.
ಅಧಿಕಾರಿಗಳಿಂದ ಇಲ್ಲವೇ ತನಿಖಾ ಪ್ರಕ್ರಿಯೆಯಲ್ಲಿ ಮಾನವ ಹಕ್ಕು ಉಲ್ಲಂಘನೆಯ ಆರೋಪ ಬಂದಿದ್ದರೆ ಪರಿಶೀಲನೆ ಮಾಡಲಿದೆ. ಎಸ್ಐಟಿ ತನಿಖೆ ನ್ಯಾಯಸಮ್ಮತ, ಕಾನೂನುಬದ್ಧ ಮತ್ತು ನಿಷ್ಪಕ್ಷಪಾತವಾಗಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಯಲಿದ್ದು, ಅಗತ್ಯ ದಾಖಲೆಗಳು, ಸಾಕ್ಷಿಗಳ ಹೇಳಿಕೆಗಳು, ತನಿಖಾ ವರದಿಗಳ ಪ್ರಗತಿ ಪರಿಶೀಲಿಸಲಿದೆ.
ಸಾಕ್ಷಿದಾರರಿಗೆ ಬೆದರಿಕೆ, ಹಿಂಸೆ ಅಥವಾ ಒತ್ತಡ ಬಂದಿದೆಯೇ ಎಂದು ವಿಚಾರಣೆ ಮಾಡುವ ಸಾಧ್ಯತೆಯೂ ಇದೆ. ಅನಾಮಿಕನ ರಕ್ಷಣೆಗೆ ಸಂಬಂಧಿಸಿದ ಸೂಚನೆ ನೀಡಬಹುದು. ಅಗತ್ಯವಿದ್ದರೆ ಪ್ರಕರಣಕ್ಕೆ ಸಂಬಂಧಿಸಿದ ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಪರಿಶೀಲಿಸುವ ಅಧಿಕಾರ ಆಯೋಗಕ್ಕಿದೆ. ತನಿಖೆಯ ನಿರ್ದಿಷ್ಟ ಹಂತದಲ್ಲಿ ತ್ವರಿತ ಕ್ರಮ, ವಿಳಂಬ ತಡೆ ಅಥವಾ ಫಾರೆನ್ಸಿಕ್ ಪರೀಕ್ಷೆ ವೇಗಗೊಳಿಸಲು ಸಲಹೆ/ಸೂಚನೆ ನೀಡಬಹುದು. ಪರಿಶೀಲನೆಯ ನಂತರ ಕೇಂದ್ರ ಅಥವಾ ರಾಜ್ಯ ಸರ್ಕಾರಕ್ಕೆ ಶಿಫಾರಸುಗಳನ್ನು ಕಳುಹಿಸಬಹುದು.
ಮಾನವ ಹಕ್ಕು ರಕ್ಷಣೆ ಕಾಯಿದೆ 1993 ಪ್ರಕಾರ ಪ್ರಕರಣದಲ್ಲಿ ಸತ್ಯಾಂಶವಿದ್ದರೆ ಸ್ವತಂತ್ರ ತನಿಖೆ ಸಾಧ್ಯತೆಯಿದ್ದು, ಪ್ರಸ್ತುತ ತನಿಖೆಯ ಮೇಲ್ವಿಚಾರಣೆ ಮಾಡಲು ಸಂಪೂರ್ಣ ಅಧಿಕಾರ ಇರುತ್ತದೆ. ಪ್ರಕರಣವು ಮಾನವ ಹಕ್ಕು ಉಲ್ಲಂಘನೆ ವ್ಯಾಪ್ತಿಗೆ ಬರುವುದೇ ಎಂದು ಮಾಹಿತಿ ಸಂಗ್ರಹ ಮಾಡಲಾಗುವುದು. ಸತ್ಯಾಂಶ ಕಂಡುಬಂದರೆ ತನಿಖೆಗೆ ಅನುಮತಿ ನೀಡಿ ತನಿಖೆ ನಡೆಸಲು ಎನ್ಹೆಚ್ಆರ್ಸಿ ತನಿಖಾ ವಿಭಾಗ ನೇಮಕ ಮಾಡಲಾಗುವುದು.