ಉಪ್ಪು, ಹುಳಿ, ಅರಶಿಣ, ಖಾರ ಮಾತ್ರ ಬಳಸಿ ಫಿಶ್ ಫ್ರೈ ಮಾಡಿರುತ್ತೀರಿ, ಲಿಂಬೆ, ಶುಂಠಿ, ಗರಂ ಮಸಾಲ ಜೊತೆ ಇತರ ಸಾಮಗ್ರಿ ಸೇರಿಸಿಯೂ ಮಾಡಿ ತಿಂದಿರುತ್ತೀರ, ಈಗ ಸ್ವಲ್ಪ ಭಿನ್ನವಾಗಿ ರುಚಿಕರ ಮಸಾಲೆ ತಯಾರಿಸಿ ತವಾ ಫ್ರೈ ಮಾಡಿ ರುಚಿ ನೋಡಿದರೆ ಮತ್ತೆ ಮತ್ತೆ ಅದೇ ರೀತಿ ಮಾಡಿ ತಿನ್ನುವುದಂತೂ ಖಂಡಿತ.
ಏನೇನು ಸಾಮಗ್ರಿ: ಖಡಕ್ ಮಸಾಲೆಗೆ ಹೊಂದುವ ಮೀನು ಅಥವಾ ಮೀಡಿಯಂ ಮಸಾಲೆಗೆ ಸೂಕ್ತವಾದ ಒಂದು ಕೆಜಿ ಮೀನು ತೆಗೆದುಕೊಂಡು ಸ್ವಚ್ಛಗೊಳಿಸಿ ಅದಕ್ಕೆ ಸ್ವಲ್ಪ ಕಲ್ಲುಪ್ಪು, ಚಿಟಿಕೆ ಅರಶಿಣ ಹಾಕಿ ಇಟ್ಟಿರಿ. ನೀವು ಆಯ್ಕೆ ಮಾಡಿರುವ ಮೀನಿಗೆ ಯಾವ ಪ್ರಮಾಣದ ಮಸಾಲೆ ಸೂಕ್ತವೋ ಅದಕ್ಕೆ ತಕ್ಕಂತೆ, ಖಾರ, ಹುಳಿ ನಿಗದಿಪಡಿಸಿಕೊಳ್ಳಿ.
ನೀವು ಒಂದು ಕೆಜಿ ಬಂಗುಡೆ ಇಲ್ಲವೇ ದೊಡ್ಡ ಬೂತಾಯಿ ಮೀನು ತೆಗೆದುಕೊಂಡರೆ ಅದಕ್ಕೆ ಬೇಕಾದ ಮಸಾಲೆ ಸಾಮಗ್ರಿಗಳನ್ನು ಹೀಗೆ ರೆಡಿ ಮಾಡಿ. ಹತ್ತು ಬ್ಯಾಡಗಿ ಒಣಮೆಣಸು, ಐದು ಗುಂಟೂರು ಮೆಣಸು, ಐದು ಕಾಳುಮೆಣಸು, ೧೫ ಮೆಂತೆ ಕಾಳು, ಸ್ವಲ್ಪ ಜೀರಿಗೆ, ಒಂದು ಟೀ ಎರಡು ಟೀ ಸ್ಪೂನ್ ಕೊತ್ತಂಬರಿ, ನಾಲ್ಕೈದು ಎಸಳು ಬೆಳ್ಳುಳ್ಳಿ, ಹತ್ತು ಕರಿಬೇವು ಎಲೆ. ಈ ಎಲ್ಲ ಮಸಾಲೆ ಸಾಮಗ್ರಿಗಳನ್ನು ಎಣ್ಣೆ ಹಾಕದೆ ಡ್ರೈ ಆಗಿ ಹುರಿದು ತೆಗೆದಿಟ್ಟುಕೊಂಡು ತಣ್ಣಗಾದ ದೊಡ್ಡ ನಿಂಬೆ ಗಾತ್ರದ ಸ್ವಲ್ಪ ಹಳೆಯ ಹುಣಸೆಹಣ್ಣು, ಸ್ವಲ್ಪ ಅರಶಿಣ ಹಾಗೂ ನೀರು ಸೇರಿಸಿ ಗಟ್ಟಿಯಾಗಿ ರುಬ್ಬಿಕೊಳ್ಳಿ.
ಈಗ ರುಬ್ಬಿಕೊಂಡ ಮಸಾಲೆಗೆ ಅಗತ್ಯವಿರುವಷ್ಟು ಮಾತ್ರ ಉಪ್ಪು ಸೇರಿಸಿ. ಮೀನಿಗೆ ಅಲ್ಲಲ್ಲಿ ಕಟ್ಸ್ ಹಾಕಿ ಚೆನ್ನಾಗಿ ಮಸಾಲೆ ಸವರಿ ಮಸಾಲೆಯಲ್ಲಿ ಮೀನನ್ನು ಕವರ್ ಮಾಡಿದಂತೆ ಅರ್ಧ ಗಂಟೆ ಇಟ್ಟು ಬಿಡಿ. ನಂತರ ಕಬ್ಬಿಣದ ಕಾವಲಿ ಬಿಸಿಗಿಟ್ಟು ಸ್ವಲ್ಪ ತೆಂಗಿನ ಎಣ್ಣೆ ಅಥವಾ ಬೇರೆ ಎಣ್ಣೆ ಹಾಕಿ ಒಂದೊಂದೇ ಮೀನು ಕಾವಲಿಯಲ್ಲಿ ಇಟ್ಟು ಉರಿ ಸಣ್ಣದು ಮಾಡಿಕೊಳ್ಳಿ. ಹೀಗೆ ಮೀನು ಕಾವಲಿಗೆ ಇಡುವಾಗ ಕಾವಲಿಗೆ ಮೀನು ತಾಗುವಲ್ಲಿ ಮಸಾಲೆ ಸರಿಯಾಗಿ ಅಂಟಿಕೊಂಡಿರುವಂತೆ ನೋಡಿಕೊಳ್ಳಿ. ನಂತರ ಕಾವಲಿಗೆ ಹಾಕಿರುವ ಮೀನಿನ ಮೇಲಿನ ಭಾಗಕ್ಕೆ ಸ್ವಲ್ಪ ಮಸಾಲೆಯನ್ನು ಸವರಿ ನಾಲ್ಕು ನಿಮಿಷ ಮುಚ್ಚಿಡಿ. ಬಳಿಕ ಮುಚ್ಚಳ ತೆರೆದು ಮೀನಿನ ಮೇಲೆ ಒಂದೊಂದು ಚಮಚ ಎಣ್ಣೆ ಹಾಕಿ ಮತ್ತೆ ಮುಚ್ಚಿ ನಾಲ್ಕು ನಿಮಿಷ ಬೇಯಲು ಬಿಡಿ. ಅನಂತರ ನಿಧಾನಕ್ಕೆ ಕಾವಲಿಯಿಂದ ಮೀನನ್ನು ತೆಗೆದು ಉಲ್ಟಾ ಮಾಡಿ ಕಾವಲಿಗೆ ಹಾಕಿ ನಾಲ್ಕು ನಿಮಿಷ ಮುಚ್ಚಿಟ್ಟು ಬೇಯಿಸಿ, ಅದಾದ ಮೇಲೆ ಸ್ಟವ್ ಆಫ್ ಮಾಡಿ ಹತ್ತು ನಿಮಿಷದ ಮೇಲೆ ರುಚಿಕರ ಫಿಶ್ ತವಾ ಫ್ರೈ ರುಚಿ ಸವಿಯಿರಿ.