ಕುರಿ ಮತ್ತು ಕೋಳಿ ಗೊಬ್ಬರ, ಕೊಟ್ಟಿಗೆ ಗೊಬ್ಬರವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವುದು, ಹಸಿರೆಲೆ ಗೊಬ್ಬರ ಉಪಯೋಗಿಸುವುದು, ಬೆಳೆ ಪದ್ಧತಿ ಪರಿವರ್ತನೆ, ಕೃಷಿ ತ್ಯಾಜ್ಯ ಸುಡದೇ ಕೊಳೆಸಿ ಗೊಬ್ಬರ ಮಾಡುವುದು ಸೇರಿದಂತೆ ಕಾಂಪೋಸ್ಟ್ ಗೊಬ್ಬರಕ್ಕೆ ಆದ್ಯತೆ ನೀಡುವುದರಿಂದ ಮಣ್ಣಿನ ಸಾವಯವ ಇಂಗಾಲದ ಪ್ರಮಾಣ ಹೆಚ್ಚಿಸಬಹುದು. ಕೈಗಾರಿಕೀಕರಣ, ನಗರೀಕರಣ, ಜನಸಂಖ್ಯೆ ಹೆಚ್ಚಳದಿಂದ ಕೃಷಿ ಭೂಮಿ ಕಡಿಮೆಯಾಗುತ್ತಿದೆ. ಮತ್ತೊಂದೆಡೆ, ಬೆಳೆಗಳಿಗೆ ರೋಗಬಾಧೆಯೂ ಅಧಿಕವಾಗಿದೆ. ಆದ್ದರಿಂದ ಮಣ್ಣಿನ ಫಲವತ್ತತೆ ಕಡೆ ಗಮನ ಹರಿಸುವುದು ಇಂದಿನ ತುರ್ತು ಅಗತ್ಯ…
ಕರ್ನಾಟಕದ ಒಟ್ಟು ಕೃಷಿ ಭೂಮಿಯ ಅರ್ಧದಷ್ಟು ಕೃಷಿ ಭೂಮಿ ಕಡಿಮೆ ಮಟ್ಟದ ಮಣ್ಣಿನ ಸಾವಯವ ಇಂಗಾಲದ ಕೊರತೆಯಿಂದ ಬಳಲುತ್ತಿರುವ ಅಂಶವನ್ನು ಕೃಷಿ ಇಲಾಖೆಯ ಇತ್ತೀಚಿನ ವರದಿಗಳು ಬಹಿರಂಗಪಡಿಸಿವೆ. ಸಾವಯವ ಇಂಗಾಲದ ಕೊರತೆಯ ಪರಿಣಾಮವಾಗಿ ಮಣ್ಣಿನ ಫಲವತ್ತತೆ ನಾಶವಾಗುತ್ತಿದ್ದು, ಬರಡು ಭೂಮಿಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೃಷಿ ಮತ್ತು ಪರಿಸರಕ್ಕೆ ಸಂಬಂಧಿಸಿದಂತೆ ಇದೊಂದು ಆತಂಕದ ವಿಷಯವಾಗಿದ್ದು, ಕೃಷಿ ಮತ್ತು ಪರಿಸರದ ಭವಿಷ್ಯಕ್ಕೆ ಅಪಾಯ ಉಂಟು ಮಾಡಲಿದೆ. ಈಗಾಗಲೇ ಉತ್ತರ ಮತ್ತು ದಕ್ಷಿಣ ಕರ್ನಾಟಕದಲ್ಲಿ ಎಣ್ಣೆ ಬೀಜಗಳು, ಹತ್ತಿ, ಕಡಲೆಕಾಯಿ, ಜೋಳ, ರಾಗಿ ಸೇರಿದಂತೆ ವಿವಿಧ ಬೆಳೆಗಳ ಇಳುವರಿಯ ಮೇಲೆ ಇದು ಪರಿಣಾಮ ಬೀರಿದೆ.
ಫಲವತ್ತಾದ ಭೂಮಿಯಲ್ಲಿ ಶೇ.೦.೭೫ರಿಂದ ೧.೫ರವರೆಗೂ ಸಾವಯವ ಇಂಗಾಲದ ಅಂಶ ಇರಬೇಕು. ೧೯೭೦ರ ದಶಕದಲ್ಲಿ ರಾಜ್ಯದ ಭೂಮಿಯಲ್ಲಿ ಶೇಕಡಾ ೧ರಷ್ಟಿದ್ದ ಸಾವಯವ ಇಂಗಾಲದ ಪ್ರಮಾಣ ಈಗ ಶೇಕಡಾ ೦.೩೨ಕ್ಕೆ ಇಳಿಕೆಯಾಗಿದೆ. ರಾಜ್ಯದ ಸುಮಾರು ೨೦ಕ್ಕೂ ಹೆಚ್ಚಿನ ಜೆಲ್ಲೆಗಳಲ್ಲಿ ಈ ಕೊರತೆ ಕಂಡುಬಂದಿದೆ. ಇದು ಕೇವಲ ಕರ್ನಾಟಕ ರಾಜ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ವಿಭಾಗ ಈ ಕುರಿತು ನಡೆಸಿದ ಜಾಗತಿಕ ಸಮೀಕ್ಷೆಯ ಪ್ರಕಾರ ಜಗತ್ತಿನ ಶೇಕಡಾ ೩೩ರಷ್ಟು ಭೂಮಿ ಫಲವತ್ತತೆ ಕಳೆದುಕೊಂಡಿದೆ.
ಮಣ್ಣಿನ ಸಾವಯವ ಇಂಗಾಲವು ಮಣ್ಣಿನ ಆರೋಗ್ಯ ಮತ್ತು ಫಲವತ್ತತೆಯ ನಿರ್ಣಾಯಕ ಸೂಚಕವಾಗಿದ್ದು, ಮಣ್ಣಿನ ಗುಣಮಟ್ಟದ ಬೆನ್ನೆಲುಬಾಗಿದೆ. ಇದು ಮಣ್ಣಿನ ಜೈವಿಕ, ರಾಸಾಯನಿಕ ಮತ್ತು ಭೌತಿಕ ಗುಣಲಕ್ಷಣಗಳು, ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಮತ್ತು ರಚನಾತ್ಮಕ ಸ್ಥಿರತೆ ಸುಧಾರಿಸುತ್ತದೆ. ಮಣ್ಣಿನ ಖನಿಜಗಳ ಕರಗುವಿಕೆ ಮತ್ತು ಸಸ್ಯಗಳಿಗೆ ಅವುಗಳ ಲಭ್ಯತೆ, ಪೋಷಕಾಂಶಗಳ ಸೋರಿಕೆ ಮತ್ತು ಮಣ್ಣಿನ ಸಾವಯವ ಆಮ್ಲಗಳ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುವ ಜೊತೆಗೆ ಮಣ್ಣಿನ ಸವೆತ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಕೃಷಿ ಭೂಮಿಯಲ್ಲಿ ಆರೋಗ್ಯಕರ ಮತ್ತು ಉತ್ಪಾದಕ ಮಣ್ಣನ್ನು ಕಾಪಾಡಿಕೊಳ್ಳಲು ಮಣ್ಣಿನ ಸಾವಯವ ಇಂಗಾಲದ ಸೂಕ್ತ ಮಟ್ಟ ಕಾಪಾಡಿಕೊಂಡು ಹೋಗುವುದು ಅತ್ಯಗತ್ಯ. ಇದು ಸಮರ್ಥನೀಯ ಕೃಷಿಗೆ ಅಡಿಪಾಯ. ೨೦೧೭ ಮತ್ತು ೨೦೨೪ರ ನಡುವೆ ನಡೆಸಿದ ವಿಶ್ಲೇಷಣೆ ಪ್ರಕಾರ, ಕರ್ನಾಟಕದ ಅರ್ಧಕ್ಕಿಂತ ಹೆಚ್ಚು ಕೃಷಿಭೂಮಿ ಅಗತ್ಯವಿರುವ ಶೇಕಡಾ ೦.೭೫ರ ಮಿತಿಗಿಂತ ಕಡಿಮೆಯಾಗಿರುವುದು ಕಂಡುಬಂದಿದೆ. ಇದು ವ್ಯಾಪಕವಾದ ಫಲವತ್ತಾದ ಮಣ್ಣಿನ ಅವನತಿ ಸೂಚಿಸುತ್ತದೆ.
ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಅತಿರೇಕದ ಬಳಕೆ, ಏಕರೀತಿಯ ಬೆಳೆ ಪದ್ಧತಿ, ತ್ಯಾಜ್ಯ ಸುಡುವುದು ಸೇರಿದಂತೆ ಹಲವಾರು ಅಂಶಗಳು ಈ ಕೊರತೆಗೆ ಪ್ರಮುಖ ಕಾರಣಗಳಾಗಿವೆ ಎಂಬ ಅಂಶವನ್ನು ಕೃಷಿ ತಜ್ಞರು ಹೊರ ಹಾಕಿದ್ದಾರೆ. ಭಾರತದಲ್ಲಿ ಅತಿಹೆಚ್ಚು ರಸಗೊಬ್ಬರಗಳನ್ನು ಬಳಸುವ ಅಗ್ರ ಐದು ರಾಜ್ಯಗಳ ಪೈಕಿ ಕರ್ನಾಟಕವೂ ಒಂದಾಗಿದ್ದು, ಪ್ರತಿ ಹೆಕ್ಟೇರ್‌ಗೆ ಬಳಸುತ್ತಿರುವ ರಸಗೊಬ್ಬರದ ಪ್ರಮಾಣ ರಾಷ್ಟ್ರೀಯ ಸರಾಸರಿ ಮೀರಿಸುತ್ತಿದೆ. ೨೦೨೦ – ೨೧ ಮತ್ತು ೨೦೨೧ – ೨೨ ಹಣಕಾಸಿನ ವರ್ಷವೊಂದರಲ್ಲಿಯೇ ೪೫ ಲಕ್ಷ ಮೆಟ್ರಿಕ್ ಟನ್‌ಗಳಷ್ಟು ರಸಗೊಬ್ಬರವನ್ನು ಕರ್ನಾಟಕದಲ್ಲಿ ಬಳಸಲಾಗಿದೆ. ಸಾವಯವ ಗೊಬ್ಬರದ ಬಳಕೆಯಲ್ಲಾದ ಕುಸಿತ ಮತ್ತು ಭಾರೀ ಪ್ರಮಾಣದಲ್ಲಿ ರಸ ಗೊಬ್ಬರದ ಬಳಕೆಯಿಂದಾಗಿ ಮಣ್ಣಿನ ಫಲವತ್ತತೆ ನಾಶವಾಗುತ್ತಿದೆ.
ಬೇಸಾಯದ ಭೂಮಿಯಲ್ಲಿ ಮಣ್ಣಿನ ಜೈವಿಕ ಆರೋಗ್ಯ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ಭೂಮಿಯಲ್ಲಿ ಸಾವಯವ ಇಂಗಾಲದ ಅಂಶ ಹೆಚ್ಚಾಗಿದ್ದರೆ, ತೇವ ಹಿಡಿದಿಟ್ಟುಕೊಳ್ಳುತ್ತದೆ. ಇದರಿಂದ ಸೂಕ್ಷ್ಮಾಣು ಜೀವಿಗಳೂ ಹೆಚ್ಚಾಗುವುದರಿಂದ ಬೆಳೆಗಳ ಇಳುವರಿ ಹೆಚ್ಚಾಗುತ್ತದೆ. ಆದರೆ, ಅತಿಯಾದ ರಾಸಾಯನಿಕ ರಸಗೊಬ್ಬರಗಳ ಬಳಕೆಯಿಂದಾಗಿ ಸೂಕ್ಷ್ಮಾಣು ಜೀವಿಗಳ ಸಂಖ್ಯೆ ಬಹಳ ಜಿಲ್ಲೆಗಳಲ್ಲಿ ಕಡಿಮೆಯಾಗುತ್ತಿದೆ. ಪರಿಣಾಮವಾಗಿ ಆಹಾರ ಧಾನ್ಯಗಳ ಉತ್ಪಾದನೆ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ.
ಮಣ್ಣಿನ ಸಾವಯವ ಇಂಗಾಲದ ಕೊರತೆ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಒಂದೇ ರೀತಿಯಲ್ಲಿಲ್ಲ. ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು, ಶಿವಮೊಗ್ಗ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಮಣ್ಣಿನಲ್ಲಿ ಸಾವಯವ ಇಂಗಾಲದ ಅಂಶ ಗಣನೀಯವಾಗಿದೆ. ಈ ಭಾಗದಲ್ಲಿ ಅರಣ್ಯ ಪ್ರದೇಶವಿದ್ದು, ಮರಗಳೂ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಗಿಡ-ಮರಗಳ ಎಲೆಗಳು ಉದುರಿ ಗೊಬ್ಬರವಾಗಿ ಮಾರ್ಪಾಡಾಗುವುದರಿಂದ ಪರಿಸ್ಥಿತಿ ಪರವಾಗಿಲ್ಲ. ಆದರೆ, ಬಾಗಲಕೋಟೆ, ಬಳ್ಳಾರಿ, ಚಾಮರಾಜನಗರ, ಕೊಪ್ಪಳ, ಕೋಲಾರ, ರಾಯಚೂರು, ಯಾದಗಿರಿ, ವಿಜಯಪುರ, ವಿಜಯನಗರ, ಗದಗ, ದಾವಣಗೆರೆ, ಚಿತ್ರದುರ್ಗ, ಕೋಲಾರ ಮತ್ತಿತರ ಜಿಲ್ಲೆಗಳ ಮಣ್ಣಿನಲ್ಲಿ ಸಾವಯವ ಇಂಗಾಲದ ಪ್ರಮಾಣ ಶೇ.೦.೭೫ಕ್ಕಿಂತಲೂ ಬಹಳಷ್ಟು ಕಡಿಮೆ ಇದೆ.
ಜಾನುವಾರು ಗೊಬ್ಬರ ಮತ್ತು ಅದರ ಸಾಗಣೆಗೆ ತಗುಲುವ ಖರ್ಚು ಅಧಿಕವಾಗಿರುವುದೂ ರಾಸಾಯನಿಕ ಗೊಬ್ಬರಗಳ ಹೆಚ್ಚಿನ ಬಳಕೆಗೆ ಕಾರಣವಾಗಿದೆ. ಸಾಮಾನ್ಯವಾಗಿ ಹೇಳುವುದಾದರೆ, ಒಂದು ಎಕರೆಗೆ ಬಳಸುವ ರಾಸಾಯನಿಕ ಗೊಬ್ಬರಕ್ಕೆ ೩೦೦೦ ರೂಪಾಯಿಗಳಾದರೆ, ಜಾನುವಾರು ಗೊಬ್ಬರಕ್ಕೆ ೧೪,೦೦೦ ರೂಪಾಯಿಗಳವರೆಗೂ ವೆಚ್ಚ ತಗುಲುತ್ತದೆ. ಇದು ರೈತರನ್ನು ಸಂಶ್ಲೇಷಿತ ಪರ್ಯಾಯಗಳ ಮೇಲೆ ಹೆಚ್ಚು ಅವಲಂಬಿಸುವಂತೆ ಮಾಡಿದೆ. ಇದಕ್ಕೆ ಪೂರಕವೆಂಬಂತೆ ಕರ್ನಾಟಕದಲ್ಲಿ ಜಾನುವಾರುಗಳ ಸಂಖ್ಯೆ ಕೂಡಾ ಗಣನೀಯವಾಗಿ ಇಳಿಮುಖವಾಗುತ್ತಿದೆ. ೨೦೦೭ರಲ್ಲಿ ೧.೪೮ ಕೋಟಿಯಷ್ಟಿದ್ದ ಜಾನುವಾರುಗಳ ಸಂಖ್ಯೆ ೨೦೧೯ರಲ್ಲಿ ೧.೧೪ ಕೋಟಿಗೆ ಇಳಿಯಿತು. ಪ್ರಸ್ತುತ ಈ ಪ್ರಮಾಣ ಮತ್ತಷ್ಟು ಕುಸಿದಿದೆ.
ಕುರಿ ಮತ್ತು ಕೋಳಿ ಗೊಬ್ಬರ, ಕೊಟ್ಟಿಗೆ ಗೊಬ್ಬರವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವುದು, ಹಸಿರೆಲೆ ಗೊಬ್ಬರ ಉಪಯೋಗಿಸುವುದು, ಬೆಳೆ ಪದ್ಧತಿ ಪರಿವರ್ತನೆ, ಕೃಷಿ ತ್ಯಾಜ್ಯ ಸುಡದೇ ಕೊಳೆಸಿ ಗೊಬ್ಬರ ಮಾಡುವುದು ಸೇರಿದಂತೆ ಕಾಂಪೋಸ್ಟ್ ಗೊಬ್ಬರಕ್ಕೆ ಆದ್ಯತೆ ನೀಡುವುದರಿಂದ ಮಣ್ಣಿನ ಸಾವಯವ ಇಂಗಾಲದ ಪ್ರಮಾಣ ಹೆಚ್ಚಿಸಬಹುದು. ಕೈಗಾರಿಕೀಕರಣ, ನಗರೀಕರಣ, ಜನಸಂಖ್ಯೆ ಹೆಚ್ಚಳದಿಂದ ಕೃಷಿ ಭೂಮಿ ಕಡಿಮೆಯಾಗುತ್ತಿದೆ. ಮತ್ತೊಂದೆಡೆ, ಬೆಳೆಗಳಿಗೆ ರೋಗಬಾಧೆಯೂ ಅಧಿಕವಾಗಿದೆ. ಆದ್ದರಿಂದ ಮಣ್ಣಿನ ಫಲವತ್ತತೆ ಕಡೆ ಗಮನ ಹರಿಸುವುದು ಇಂದಿನ ತುರ್ತು ಅಗತ್ಯ.
ಬೆಳೆಯುತ್ತಿರುವ ಈ ಬಿಕ್ಕಟ್ಟನ್ನು ಎದುರಿಸಲು, ಕೃಷಿ ಜ್ಞಾನಿಗಳು ಸುಸ್ಥಿರ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಸಲಹೆ ನೀಡುತ್ತಾರೆ. ಉತ್ಪಾದಕತೆ ಮತ್ತು ಮಣ್ಣಿನ ಆರೋಗ್ಯದ ನಡುವೆ ಸಮತೋಲನ ಸಾಧಿಸಲು, ಸಾವಯವ ಮತ್ತು ಅಜೈವಿಕ ರಸಗೊಬ್ಬರಗಳ ಏಕೀಕರಣವನ್ನು ಮಣ್ಣಿನ ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತ್ರದ ತಜ್ಞರು ಪ್ರತಿಪಾದಿಸು ತ್ತಾರೆ. ಹಸಿರೆಲೆ ಗೊಬ್ಬರ, ಕಾಂಪೋಸ್ಟ್ ಬಳಕೆ ಮತ್ತು ಸುಗ್ಗಿಯ ನಂತರದ ಬೆಳೆಗಳ ಅವಶೇಷಗಳನ್ನು ಹೊಲದಲ್ಲಿ ಕೊಳೆಸುವಂತಹ ಅಭ್ಯಾಸಗಳನ್ನು ರೈತರು ಬೆಳೆಸಿಕೊಂಡರೆ ಸಾವಯವ ಇಂಗಾಲದ ಪ್ರಮಾಣ ಹೆಚ್ಚಿಸಿ ಮಣ್ಣಿನ ಫಲವತ್ತತೆ ಕಾಪಾಡಿಕೊಂಡು ಹೋಗಲು ಸಹಾಯಕ. ಮಣ್ಣು ನಮ್ಮ ಜೀವನಾಡಿ. ಅದರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ.
– ಡಾ. ಅಮ್ಮಸಂದ್ರ ಸುರೇಶ್
ಲೇಖಕ, ಮೈಸೂರು