ದೇಶದ ಜನರಿಗೆ ಸೇನೆಯ ಮೇಲೆ ಗೌರವ, ನಂಬಿಕೆ, ಹೆಮ್ಮೆ ಇದೆ. ದೇಶ ರಕ್ಷಣೆ ವಿಚಾರ ಬಂದಾಗ ನಮ್ಮ ಸೇನೆ ಒಂದೇ ಒಂದು ಹೆಜ್ಜೆ ಕೂಡ ಹಿಂದೆ ಸರಿಯುವುದಿಲ್ಲ. ನಿಮ್ಮಿಂದಾಗಿಯೇ ನಮ್ಮ ಶತ್ರು ನಮ್ಮ ಭೂಮಿ ಮೇಲೆ ಕಾಲಿಡಲು ಸಾಧ್ಯ ಆಗಿಲ್ಲ. ಕಾರ್ಗಿಲ್ ಯದ್ದವೇ ಇರಲಿ, ಆಪರೇಷನ್ ಸಿಂಧೂರ್ ಇರಲಿ ಏನೇ ಇದ್ದರೂ ಸೇನೆ ಮಾಡಿ ತೋರಿಸಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಯೋಧರ ಗುಣಗಾನ ಮಾಡಿದರು.
ದೇಶ ಕಾಯುತ್ತಿರುವ ವೀರ ಯೋಧರಿಗೆ ಕೃತಜ್ಞತೆ, ಹುತಾತ್ಮರಿಗೆ ನಮನ, ಅವರ ಕುಟುಂಬ ಸದಸ್ಯರಿಗೆ ಅಭಿನಂದನೆ ಸಲ್ಲಿಸಲು ಬೆಂಗಳೂರಿನ ಟೌನ್ ಹಾಲ್ ನಲ್ಲಿ ಬುಧವಾರ ಹಮ್ಮಿಕೊಂಡಿದ್ದ “ಜೈ ಹಿಂದ್ ಸಭಾ” ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಸೇನೆಯಲ್ಲಿ ಎಷ್ಟು ನೇಮಕಾತಿ ಆಗುವುದು ಬಾಕಿ ಇದೆ ಎಂದು ನಾವು ಹಲವು ಬಾರಿ ಪ್ರಶ್ನೆ ಮಾಡಿದ್ದೇವೆ. ೧,೭೮,೦೦೦ ಹುದ್ದೆಗಳು ಸೇನೆಯಲ್ಲಿ ಬಾಕಿ ಇವೆ. ೨೫ ಸಾವಿರಕ್ಕೂ ಹೆಚ್ಚು ಅಧಿಕಾರಿಗಳ ಮಟ್ಟದ ಭರ್ತಿ ನೇಮಕಾತಿ ಬಾಕಿ ಇದೆ. ನೇಮಕಾತಿಯನ್ನೇ ನಾವು ಮಾಡಲಿಲ್ಲ ಅಂದ್ರೆ ದೇಶದ ಸೇವೆ ಮಾಡುವುದು ಹೇಗೆ, ದೇಶದ ಭದ್ರತೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಏರ್ ಸ್ಕ್ವಾಡ್ರಂಟ್ ನೇಮಕಾತಿ ಬಾಕಿ ಇದೆ. ಒಂದು ಶ್ರೇಣಿ-ಒಂದು ಪಿಂಚಣಿ ಯೋಜನೆ ಬಗ್ಗೆ ರಾಹುಲ್ ಗಾಂಧಿ ಹಲವು ಬಾರಿ ಧ್ವನಿ ಎತ್ತಿದ್ದಾರೆ. ಹಣಕಾಸು ಇಲಾಖೆ ಹಣಕಾಸು ಇಲಾಖೆಯಲ್ಲಿ ಕುಳಿತವರು ಸಮ್ಮತಿ ಸೂಚಿಸುವುದೇ ಇಲ್ಲ. ಸೈನಿಕರ ಪೆನ್ಶನ್ ವಿಚಾರದಲ್ಲಿ ಹೊಂದಾಣಿಕೆ ಬೇಡ. ಒಂದು ಶ್ರೇಣಿ-ಒಂದು ಪಿಂಚಣಿ ಯೋಜನೆ ಜಾರಿಗೆ ಬರಲೇಬೇಕು ಎಂದು ಆಗ್ರಹಿಸಿದ್ದಾರೆ.
ಮೌಂಟೇನ್ ಸ್ಟ್ರೈಕ್ ಕಾರ್ಪ್ಸ್ ನೇಮಕ ಬಗ್ಗೆ ಮನಮೋಹನ್ ಸಿಂಗ್ ಆಸಕ್ತಿ ಹೊಂದಿದ್ದರು. ಆದರೆ ೧೧ ವರ್ಷಗಳಿಂದ ಮೌಂಟೇನ್ ಸ್ಟ್ರೈಕ್ ಕಾರ್ಪ್ಸ್ ಸ್ಥಾಪನೆ ಆಗಲೇ ಇಲ್ಲ, ಯಾವಾಗ ಇದಾಗುತ್ತದೆ ಎಂದು ಸರ್ಕಾರವನ್ನು ನಾವು ಕೇಳಲೇಬೇಕಾಗಿದೆ. ನಮ್ಮ ದೇಶದ ವಿಚಾರದಲ್ಲಿ ಮೂಗು ತೂರಿಸಲು, ನಮ್ಮ ಯುದ್ಧವನ್ನು ನಿಲ್ಲಿಸಲು ಟ್ರಂಪ್ ಯಾರು, ಕದನ ವಿರಾಮದ ಷರತ್ತುಗಳು ಏನಾಗಿತ್ತು ಎಂಬುದನ್ನು ಯಾರೂ ಬಹಿರಂಗಪಡಿಸಿಲ್ಲ ಎಂದರು.
ಅಪರೇಷನ್ ಸಿಂಧೂರಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ, ನಾವೆಲ್ಲಾ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಬೆಂಬಲ ನೀಡಿದ್ದೇವೆ. ನಮ್ಮಲ್ಲಿ ರಾಜಕೀಯ ಭಿನ್ನಾಬಿಪ್ರಾಯಗಳು ಇರಬಹುದು. ಆದರೆ ನಮಗೆ ದೇಶ ಮೊದಲು, ನಂತರ ಉಳಿದದ್ದು. ಪಾಕಿಸ್ತಾನದಲ್ಲಿ ಟೆರರಿಸ್ಟ್ ಫ್ಯಾಕ್ಟರಿ ಇದೆ. ಪಾಕಿಸ್ತಾನಕ್ಕೆ ನಮ್ಮ ಸೈನಿಕರು ತಕ್ಕ ಉತ್ತರ ಕೊಟ್ಟಿದ್ದಾರೆ. ವಿಶೇಷ ಸಂಸತ್ ಅಧಿವೇಶನ ಕರೆಯುವಂತೆ ಹೇಳಿದ್ದೆವು. ದೇಶದ ವಿಚಾರದಲ್ಲಿ ನಾವು ಯಾವುತ್ತು ರಾಜಕೀಯ ಮಾಡುವುದಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಹೇಳಿದ್ದಾರೆ.
ಮುಂಬೈ ದಾಳಿ ನಡೆದಾಗ ಜಾಹೀರಾತಿನ ಮೂಲಕ ಟೀಕೆ ಮಾಡಿದ್ದರು, ಆದರೆ ನಾವು ಹಾಗೆ ಮಾಡಿಲ್ಲ. ಯಾಕೆ ಪಹಲ್ಗಾಮ್ ಘಟನೆಯಲ್ಲಿ ಗುಪ್ತಚರ ಇಲಾಖೆ ವಿಫಲವಾಯ್ತು, ಇದಕ್ಕೆ ಕೇಂದ್ರ ಉತ್ತರ ಕೊಡಬೇಕು. ೨೬ ಜನರ ಹತ್ಯೆ ಮಾಡಿದ ಭಯೋತ್ಪಾದಕರು ಎಲ್ಲಿದ್ದಾರೆ, ಕದನ ವಿರಾಮದ ಷರತ್ತುಗಳೇನು ಎಂದು ಪ್ರಧಾನಿಗಳು ಹೇಳಬೇಕು, ನಮ್ಮ ವಿದೇಶಾಂಗ ನೀತಿ ಅಮೆರಿಕವನ್ನು ಅವಲಂಬಿಸಿದೆಯಾಎಂಬ ಪ್ರಶೆಗೂ ಉತ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.