ಹದಿಮೂರು ವರ್ಷದ ಬಾಲಕನೊಬ್ಬ ಪವಾಡವೆಂಬಂತೆ ಆಫ್ಘನ್ನ ಕಾಬೂಲ್ನಿಂದ ವಿಮಾನದಲ್ಲಿ ದೆಹಲಿಗೆ ತಲುಪಿದ್ದಾನೆ. ಪವಾಡ ಏಕೆಂದರೆ ಈತ ವಿಮಾನದ ವಿಮಾನದ ಚಕ್ರ ಇರುವ ಲ್ಯಾಂಡಿಂಗ್ ಗೇರ್ನಲ್ಲಿ ಅಡಗಿ ಕುಳಿತುಕೊಂಡು ದೆಹಲಿ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದ್ದಾನೆ.
ಭಾನುವಾರ ಕಾಬೂಲಿನಿಂದ ದೆಹಲಿ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆದ ಕಾಮ್ ಏರ್ಲೈನ್ಸ್ನಲ್ಲಿ ಬಾಲಕ ಆಗಮಿಸಿದ್ದ. ವಿಮಾನ ಲ್ಯಾಂಡ್ ಆದ ಬಳಿಕ ಟ್ಯಾಕ್ಸಿ ವೇ ಬಳಿ ಆತ ನಡೆದುಕೊಂಡು ಹೋಗುತ್ತಿರುವುದನ್ನು ಗಮನಿಸಿದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ವಿಚಾರಣೆ ನಡೆಸಿದ ಬಳಿಕ ಕಾಬೂಲಿಗೆ ವಾಪಸ್ ಕಳುಹಿಸಿದ್ದಾರೆ.
ವಿಚಾರಣೆ ವೇಳೆ ನಾನು ಕಾಬೂಲ್ ವಿಮಾನ ನಿಲ್ದಾಣವನ್ನು ಪ್ರವೇಶಿಸಿದ್ದೆ. ನಂತರ ಕುತೂಹಲಕ್ಕಾಗಿ ವಿಮಾನದ ಹಿಂಭಾಗದ ಲ್ಯಾಂಡಿಂಗ್ ಗೇರ್ ವಿಭಾಗದೊಳಗೆ ಪ್ರವೇಶಿಸಿದ್ದೆ ಎಂದಿದ್ದಾನೆ. ವಿಮಾನದ ಲ್ಯಾಂಡಿಂಗ್ ಗೇರ್ ವಿಭಾಗವನ್ನು ತಪಾಸಣೆ ನಡೆಸಲಾಗಿದ್ದು, ವಿಮಾನ ಸುರಕ್ಷಿತವಾಗಿದೆ. ಬಾಲಕನನ್ನು ಹಲವು ಗಂಟೆ ವಿಚಾರಣೆ ನಡೆಸಿ ಮತ್ತೊಂದು ವಿಮಾನದ ಮೂಲಕ ಕಾಬೂಲ್ಗೆ ಕಳುಹಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಬೂಲ್ನಿಂದ ದೆಹಲಿಗೆ 94 ನಿಮಿಷಗಳ ಪ್ರಯಾಣದಿಂದಲ್ಲಿ ಆತ ಬದುಕಿ ಉಳಿದಿರುವುದೇ ಪವಾಡ ಎಂದು ಹೇಳಲಾಗುತ್ತಿದೆ. ವಿಮಾನ ಟೇಕಾಫ್ ಆದ ನಂತರ ವೀಲ್ ಬೇ ಬಾಗಿಲು ತೆರೆಯು ತ್ತದೆ. ಆ ಚಕ್ರ ಒಳಗಡೆ ಹೋದಂತೆ ಆ ಬಾಗಿಲು ಮುಚ್ಚುತ್ತದೆ. ಈ ಜಾಗದಲ್ಲಿ ಆತ ಕುಳಿತುಕೊಂಡಿದ್ದ. 30,000 ಅಡಿ ಎತ್ತರದಲ್ಲಿ ತಾಪಮಾನವು -50°C ತಲುಪಬಹುದು, ಆಮ್ಲಜನಕದ ಕೊರತೆ, ಚಕ್ರಗಳಿಂದ ಪುಡಿಯಾಗುವ ಅಪಾಯಗಳಿರುತ್ತವೆ. ಆದರೆ ವಿಮಾನ ಕಡಿಮೆ ಎತ್ತರದಲ್ಲಿ ಹಾರಾಡಿದ್ದರಿಂದ ಆತ ಪಾರಾಗಿರಬಹುದು ಎಂಬ ಚರ್ಚೆಗಳು ಕೇಳಿ ಬಂದಿವೆ.