ಬೆಂಗಳೂರಿನ ತಲಘಟ್ಟಪುರದ ಅವಲಹಳ್ಳಿಯಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ವರದಕ್ಷಿಣೆ ಕಿರುಕುಳ ಆರೋಪ ಕೇಳಿ ಬಂದಿದೆ. ನವ್ಯಾ (28) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ನವ್ಯಾ ಮತ್ತು ಶೈಲೇಶ್ ದಂಪತಿ ನಾಲ್ಕು ವರ್ಷದ ಹಿಂದೆ ವಿವಾಹವಾಗಿದ್ದರು. ಶೈಲೇಶ್ ಸಾಫ್ಟ್ ವೇರ್ ಎಂಜಿನಿಯರ್.
ನವ್ಯಾಗೆ ಪತಿ ಮತ್ತವರ ಮನೆಯವರು ಕಿರುಕುಳ ನೀಡುತ್ತಿದ್ದರು ಎನ್ನಲಾಗುತ್ತಿದೆ. ಮೃತ ನವ್ಯಾ ಕುಟುಂಬಸ್ಥರು ಪತಿ ಶೈಲೇಶ್ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನಲ್ಲಿ ಕುಡಿತ ಮತ್ತಿನಲ್ಲಿ ಜೊತೆಗಿದ್ದವನ ಕೊಲೆ
ಮಾರತ್ ಹಳ್ಳಿ ಸರ್ವಿಸ್ ರಸ್ತೆಯಲ್ಲಿ ರಾಯಚೂರು ಮೂಲದ ಮಹದೇವ (45) ಎಂಬಾತ ಕೊಲೆಯಾಗಿರುವುದು ಪತ್ತೆಯಾಗಿದೆ. ತಾಂಜಾವೂರು ಮೂಲದ ರಾಜು ಎಂಬಾತ ಹರಿತವಾದ ಆಯುಧದಿಂದ ಹೊಟ್ಟೆಗೆ ಇರಿದು ಕೊಲೆ ಮಾಡಿದ್ದಾನೆ. ಇವರಿಬ್ಬರೂ ಮಾರತ್ ಹಳ್ಳಿ ಭಾಗದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು.
ರಾತ್ರಿ ಕುಡಿದ ಮತ್ತಿನಲ್ಲಿ ನಡೆದ ಜಗಳದ ವೇಳೆ ಕೊಲೆಯಾಗಿದೆ. ಸ್ಥಳಕ್ಕೆ ಡಿಸಿಪಿ ಪರಶುರಾಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾರತ್ ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.