ಬೆಂಗಳೂರಿನ ಮಾರತ್ತಹಳ್ಳಿಯ ಯಮಲೂರಿನಲ್ಲಿ ಬಿಲ್ಡರ್ ಶಿವಕುಮಾರ್ ಎಂಬವರ ಮನೆಯಿಂದ 18 ಕೋಟಿ ರೂಪಾಯಿ ಮೌಲ್ಯದ ಚಿನ್ನ, ವಜ್ರ, ಬೆಳ್ಳಿ ಮತ್ತು ನಗದು ಕಳ್ಳತನವಾಗಿದೆ. ದಿನೇಶ್ ಮತ್ತು ಕಮಲಾ ಎಂಬ ದಂಪತಿಯನ್ನು ಕೆಲವು ದಿನಗಳ ಹಿಂದೆ ಮನೆ ಕೆಲಸಕ್ಕೆಂದು ನೇಮಿಸಿಕೊಳ್ಳಲಾಗಿತ್ತು. ಆದಂಪತಿ ಈ ಕೃತ್ಯ ಎಸಗಿದ್ದಾರೆಂಬುದು ಮನೆ ಮಾಲೀಕರ ದೂರು.
ಮನೆಯಲ್ಲಿದ್ದವರೆಲ್ಲ ಭೂಮಿ ಪೂಜೆ ಕಾರ್ಯಕ್ರಮವೊಂದಕ್ಕೆ ಹೋಗಿದ್ದ ಸಮಯದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ನಿಷ್ಕ್ರಿಯಗೊಳಿಸಿ, ವಿದ್ಯುತ್ ಸಂಪರ್ಕ, ಯುಪಿಎಸ್ ಮತ್ತು ವೈಫೈ ಆಫ್ ಮಾಡಿ ಕಳವು ಮಾಡಿದ್ದಾರೆ. ಒಟ್ಟು ಐದು ಮಂದಿ ಈ ಕಳ್ಳತನದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದ್ದು, 11.5 ಕೆಜಿ ಚಿನ್ನ, ವಜ್ರ, 5 ಕೆಜಿ ಬೆಳ್ಳಿ ಮತ್ತು 11.5 ಲಕ್ಷ ರೂಪಾಯಿ ನಗದು ಕಳವಾಗಿದೆ.
ಈ ಸಂಪತ್ತು ತನ್ನ ಕಳೆದ 32 ವರ್ಷಗಳ ಶ್ರಮದ ಗಳಿಕೆಯಾಗಿದೆ. ಕುಟುಂಬಕ್ಕೆ ಅವನ್ನು ಹಂಚಿಕೆ ಮಾಡಲು ನಿರ್ಧರಿಸಿದ್ದ ದಿನವೇ ಕಳವಾಗಿದೆ. ಮಕ್ಕಳಿಗೆ ಸರ್ಪ್ರೈಸ್ ಆಗಿ ನೀಡಲು ಇಟ್ಟಿದ್ದ ಐಫೋನ್ಗಳು ಕೂಡ ಕಳವಾಗಿವೆ ಸೇರಿವೆ ಎಂದು ಮನೆ ಮಾಲೀಕರು ತಿಳಿಸಿದ್ದಾರೆ.
ಅಮೆರಿಕ ದಂಪತಿಯ ಬೆಂಗಳೂರು ಮನೆಯಲ್ಲಿ ಕಳವು
ಅಮೆರಿಕದ ದಂಪತಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಪಶ್ಚಿಮ ಬಂಗಾಳ ಮೂಲದ ಕೆಲಸಗಾರ ಮನೆಯಲ್ಲಿ ಕಳ್ಳತನ ನಡೆಸಿದ್ದು, ರಾಯಭಾರ ಕಚೇರಿಗೆಮನೆ ಮಾಲೀಕರು ದೂರು ನೀಡಿದ್ದರ. ಹೀಗಾಗಿ ಅಮೆರಿಕ ರಾಯಭಾರ ಕಚೇರಿ ನೇರವಾಗಿ ಡಿಜಿ, ಐಜಿಪಿಗೆ ದೂರು ನೀಡಿದೆ.
ವರ್ಷದ ಹಿಂದೆ ಕೆಲಸಕ್ಕೆ ಸೇರಿಕೊಂಡಿದ್ದ ಪಶ್ಚಿಮ ಬಂಗಾಳ ಮೂಲದ ಚಂದನ್ ರೌಲ್ ಎಂಬಾತ ಮನೆಯಲ್ಲಿದ್ದ ವಜ್ರ, ಚಿನ್ನಾಭರಣ ಸೇರಿ 600 ಅಮೆರಿಕನ್ ಡಾಲರ್ ಕದ್ದಿದ್ದ. ಜೀವನ್ ಭೀಮಾನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಸಂಬಂಧ ಕ್ಷೀಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಕಳವು ಮಾಡಿದ್ದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.


