ಬಾಗಲಕೋಟೆಯ ಗದ್ದನಕೇರಿ ಕ್ರಾಸ್ ಬಳಿಯ ಮನೆಯೊಂದರ ಮುಂದೆ ದೀಪಾವಳಿ ಸಂಭ್ರಮಕ್ಕೆ ಹಚ್ಚಿಟ್ಟಿದ್ದ ದೀಪದಿಂದ ಹೊತ್ತಿಕೊಂಡ ಬೆಂಕಿ ಇಡೀ ಮನೆಯನ್ನು ಸುಟ್ಟಿದೆ, ಘಟನೆಯಲ್ಲಿ ಏಳು ಜನ ಗಾಯಗೊಂಡಿದ್ದಾರೆ.
ಉಮೇಶ್ ಮೇಟಿ ಎಂಬವರ ಕಟ್ಟಡಲ್ಲಿ ಬೆಂಕಿ ದುರಂತ ಸಂಭವಿಸಿದೆ. ಈ ಕಟ್ಟಡದಲ್ಲಿ ರಾಜೇಂದ್ರ ತಪಶೆಟ್ಟಿ ಕುಟುಂಬ ಸೇರಿ ಎರಡು ಕುಟುಂಬ ಬಾಡಿಗೆಗೆ ಇದ್ದರು. ರಾಜೇಂದ್ರ ತಪಶೆಟ್ಟಿ ಕುಟುಂಬಸ್ಥರು ಮನೆ ಎದುರು ದೀಪ ಹಚ್ಚಿದ್ದರು. ಆ ದೀಪದ ಬೆಂಕಿ ಮನೆ ಎದುರಿಗೆ ಬಿದ್ದಿದ್ದ ಆಯಿಲ್ಗೆ ತಗುಲಿ ಬೆಂಕಿ ಹೊತ್ತಿಕೊಂಡು ಎರಡು ಬೈಕ್ ಸುಟ್ಟು ಮನೆಗೂ ವ್ಯಾಪಿಸಿದೆ. ಅಡುಗೆ ಮನೆಯ ಸಿಲಿಂಡರ್ ಸೋರಿ ಮತ್ತಷ್ಟು ಬೆಂಕಿ ತೀವ್ರಗೊಂಡು ಮನೆ ಸುಟ್ಟು ಕರಕಲಾಗಿದೆ.
ರಾಜೇಂದ್ರ ತಪಶೆಟ್ಟಿ ಬೋರ್ ವೆಲ್ ಕೆಲಸ ಮಾಡುತ್ತಿದ್ದರು. ಮನೆ ಎದುರು ಬೋರ್ ವೆಲ್ ವಾಹನಗಳ ಆಯಿಲ್, ಗ್ರೀಸ್ ಬಿದ್ದಿತ್ತು. ದೀಪದ ಬೆಂಕಿ ಆಯಿಲ್, ಗ್ರೀಸ್ಗೆ ತಗುಲಿ ನಂತರ ಬೈಕ್ ಮತ್ತು ಮನೆಗೂ ವ್ಯಾಪಿಸಿದೆ. ಈ ವೇಳೆ ಹೊರಗಡೆ ಓಡಿ ಬಂದು ರಾಜೇಂದ್ರ ತಪಶೆಟ್ಟಿ ಕುಟುಂಬ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದೆ.
ಅದೇ ಕಟ್ಟಡದ ಮೇಲ್ಮಹಡಿಯಲ್ಲಿ ವಾಸವಿದ್ದ ಮತ್ತೊಂದು ಕುಟುಂಬದ ಜನರು ಬೆಂಕಿಯ ತಾಪ ತಗುಲಿ ಗಾಯಗೊಂಡಿದ್ದಾರೆ. ಮನೆಯಲ್ಲಿನ ವಸ್ತುಗಳು ಸುಟ್ಟು ಕರಕಲಾಗಿವೆ. ಬಾಗಲಕೋಟೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ಶಮನ ಮಾಡಿದ್ದಾರೆ. ಕಲಾದಗಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.