Menu

ಸುಪ್ರೀಂ ಮೆಟ್ಟಿಲೇರಿದ ಹನಿಟ್ರ್ಯಾಪ್: ವಿಚಾರಣೆಗೆ ಅಂಗೀಕಾರ

supreme court

ನವದೆಹಲಿ: ಕರ್ನಾಟಕದ ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಎಬ್ಬಿಸಿರುವ ಮಧುಬಲೆ ಪ್ರಕರಣವು ಸುಪ್ರೀಂಕೋರ್ಟ್‌ನ ಮೆಟ್ಟಿಲೇರಿದೆ.
ಕರ್ನಾಟಕದಲ್ಲಿನ ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ಸುಪ್ರೀಂಕೋರ್ಟ್ ಸಮ್ಮತಿಸಿದೆ.

ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾ. ಸಂಜೀವ್ ಖನ್ನಾ ಅವರ ನೇತೃತ್ವದ ನ್ಯಾಯ ಪೀಠದ ಮುಂದೆ ಧನಬಾದ್ ನಿವಾಸಿಯಾಗಿರುವ ವಿನಯ್‌ಕುಮಾರ್ ಸಿಂಗ್ ಎಂಬುವರು ಮಾಧ್ಯಮ ವರದಿಗಳ ಆಧಾರದ ಮೇಲೆ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಾರೆ.

ಇದರಿಂದ ಹನಿಟ್ರಾಪ್‌ ಪ್ರಕರಣ ಮತ್ತೊಂದು ರೋಚಕ ಘಟ್ಟ ತಲುಪಿದ್ದು, ಒಂದು ವೇಳೆ ನ್ಯಾಯಾಲಯ ಸಿಬಿಐ ಇಲ್ಲವೇ ಯಾವುದಾದರೊಂದು ತನಿಖೆಗೆ ಆದೇಶ ನೀಡಿದರೆ ಪ್ರಕರಣದ ಪ್ರಮುಖ ರೂವಾರಿಗಳಿಗೆ ಭಾರೀ ಕಾನೂನಿನ ಸಂಕಷ್ಟ ಎದುರಾಗಲಿದೆ.

ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸಂಜೀವ್‌ ಖನ್ನಾ ಅವರ ನೇತೃತ್ವದ ಪೀಠಕ್ಕೆ ಪಿಐಎಲ್‌ ಸಲ್ಲಿಸಲಾಗಿದ್ದು, ಹನಿಟ್ರಾಪ್‌ನಲ್ಲಿ ನ್ಯಾಯಾಧೀಶರು, ರಾಜಕಾರಣಿಗಳು, ಅಧಿಕಾರಿಗಳು ಸೇರಿದಂತೆ ಒಟ್ಟು 48 ಮಂದಿ ಇದರಲ್ಲಿ ಇದ್ದಾರೆಂದು ಆರೋಪಿಸಲಾಗಿದೆ. ಹೀಗಾಗಿ ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯಾಂಶವನ್ನು ಬಯಲೆಗೆಳೆಯಬೇಕೆಂದು ಕೋರಲಾಗಿದೆ.

ನೀವು ಮೊದಲು ಅರ್ಜಿಯನ್ನು ಸಲ್ಲಿಸಿ ಎಂದು ಮುಖ್ಯ ನ್ಯಾಯಮೂರ್ತಿ ಸಂಜೀವ್‌ ಖನ್ನಾ ಅರ್ಜಿದಾರರಿಗೆ ಸೂಚನೆ ಕೊಟ್ಟಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಅರ್ಜಿದಾರರು ಆಗಲೇ ಅರ್ಜಿಯನ್ನು ಸಲ್ಲಿಕೆ ಮಾಡಲಾಗಿದೆ. ಅದು ಲಿಸ್ಟ್‌ ಕೂಡ ಆಗಿದೆ. ಹೀಗಾಗಿ ತನಿಖೆ ನಡೆಸಬೇಕೆಂದು ಮನವಿ ಮಾಡಿದರು.

ಇದಕ್ಕೆ ಮುಖ್ಯ ನ್ಯಾಯಮೂರ್ತಿಗಳು ಮೊದಲು ಪಟ್ಟಿಯಾಗಲಿ, ಅರ್ಜಿಯನ್ನು ಆದ್ಯತೆ ಮೇರೆಗೆ ಪರಿಗಣಿಸಿ ಇಂದು ಅಥವಾ ನಾಳೆ ಅರ್ಜಿ ವಿಚಾರಣೆ ನಡೆಸುವುದಾಗಿ ಹೇಳಿದ್ದಾರೆ.ಪಿಐಎಲ್‌ನಲ್ಲಿ ಪ್ರಮುಖವಾಗಿ ಅರ್ಜಿದಾರರು ಇತ್ತೀಚೆಗೆ ಮುಕ್ತಾಯಗೊಂಡ ಕರ್ನಾಟಕ ವಿಧಾನಮಂಡಲದ ಜಂಟಿ ಅಧಿವೇಶನದ ವೇಳೆ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅವರು ತಮ ವಿರುದ್ಧ ಹನಿಟ್ರಾಪ್‌ ಯತ್ನ ನಡೆದಿದೆ. ಇದರಲ್ಲಿ ರಾಜಕಾರಣಿಗಳು, ನ್ಯಾಯಾಧೀಶರು ಹಾಗೂ ಅಧಿಕಾರಿಗಳು ಸೇರಿದಂತೆ ಒಟ್ಟು 48 ಮಂದಿ ಇದ್ದಾರೆ ಎಂದು ಉಲ್ಲೇಖ ಮಾಡಿದ್ದಾರೆ.

ಇದು ಗಂಭೀರ ಸ್ವರೂಪದ ಪ್ರಕರಣವಾಗಿದ್ದು, ತನಿಖೆ ನಡೆಸುವ ಅಗತ್ಯವಿದೆ. ಪ್ರಕರಣದಲ್ಲಿ ನ್ಯಾಯಮೂರ್ತಿಗಳ ಹೆಸರು ಉಲ್ಲೇಖವಾಗಿರುವುದರಿಂದ ಇದು ನ್ಯಾಯಾಂಗ ವ್ಯವಸ್ಥೆ ಮೇಲೆಯೇ ಸಾರ್ವಜನಿಕರ ನಂಬಿಕೆ ಹುಸಿಗೊಳಿಸಲಿದೆ. ಹೀಗಾಗಿ ಉನ್ನತ ಮಟ್ಟದ ತನಿಖೆ ಅಗತ್ಯವಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ. ಅರ್ಜಿದಾರರ ಮನವಿಯನ್ನು ಪುರಸ್ಕರಿಸಿರುವ ನ್ಯಾಯಪೀಠ ಇಂದು ಅಥವಾ ನಾಳೆ ಅರ್ಜಿ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

Related Posts

Leave a Reply

Your email address will not be published. Required fields are marked *