ರಾಜ್ಯದ ಪ್ರಭಾವಿ ಸಚಿವರೊಬ್ಬರನ್ನು ಹನಿಟ್ರ್ಯಾಪ್ ಬಲೆಗೆ ಕೆಡವಲು ನಡೆಸಿರುವ ಪ್ರಯತ್ನ ವಿಧಾನಸಭೆಯಲ್ಲೂ ಪ್ರತಿಧ್ವನಿಸಿತು. ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತು ನಡೆದ ಚರ್ಚೆಯ ಸಂದರ್ಭದಲ್ಲಿ ಹನಿಟ್ರ್ಯಾಪ್ ವಿಚಾರ ಪ್ರಸ್ತಾಪ ಮಾಡಿದ ಬಿಜೆಪಿಯ ಸುನೀಲ್ ಕುಮಾರ್ ‘ ವಿರೋಧಿಗಳನ್ನು ಹತ್ತಿಕ್ಕಲು ಈ ರೀತಿ ಕೆಲಸ ಮಾಡೋದು ಸರಿಯೇ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾರ್ ಯಾರೋ ಹನಿ ಟ್ರ್ಯಾಪ್ ಮಾಡುತ್ತಿದ್ದಾರೆ, 224 ಶಾಸಕರು ಇದ್ದೇವೆ, ಸಾರ್ವಜನಿಕವಾಗಿ ಗೌರವದಿಂದ ಕೆಲಸ ಮಾಡುತ್ತಿದ್ದೇವೆ. ಈ ಸರ್ಕಾರದಲ್ಲಿ ನಿನ್ನೆ ಮೊನ್ನೆಯಿಂದ ಹನಿ ಟ್ರ್ಯಾಪ್ ಬಗ್ಗೆ ಸುದ್ದಿ ಆಗುತ್ತಿದೆ. ಸಾರ್ವಜನಿಕ ವ್ಯವಸ್ಥೆಯಲ್ಲಿ ಗೌರವದಿಂದ ಬದುಕುವುದು ಬೇಡ್ವಾ? ಯಾರ ಬಗ್ಗೆ ಯಾರ್ ಯಾರೋ ಹನಿ ಟ್ರ್ಯಾಪ್ ಮಾಡುತ್ತಿದ್ದಾರೆ ಎಂದರೆ ಏನು ಪರಿಸ್ಥಿತಿ ಇದು ಎಂದರು.
ಸಾರ್ವಜನಿಕ ಬದುಕೇ ಬೇಡ ಎನ್ನುವಷ್ಟು ಸುದ್ದಿ ಹರಿದಾಡುತ್ತಿದೆ. ಹಾಗಾದರೆ ಸರ್ಕಾರಕ್ಕೆ ಜವಾಬ್ದಾರಿ ಇಲ್ಲವೇನು, ವಿರೋಧಿಗಳನ್ನು, ತನ್ನ ಪಕ್ಷದಲ್ಲಿರುವ ಪ್ರತಿಸ್ಪರ್ಧಿಗಳನ್ನು ಹತ್ತಿಕ್ಕಬೇಕು ಎನ್ನುವ ಕಾರಣಕ್ಕೆ ಯಾವ ಲೆವೆಲ್ ಗೂ ಹೋಗಬಹುದಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರವೇ ಹನಿ ಟ್ರ್ಯಾಪ್ ಫ್ಯಾಕ್ಟರಿ ಇಟ್ಟುಕೊಂಡಿದೆ, ಸರ್ಕಾರವೇ ಹನಿ ಟ್ರ್ಯಾಪ್ ಫ್ಯಾಕ್ಟರಿ ಇಟ್ಟುಕೊಂಡರೆ ಯಾರಿಗೆ ಬುದ್ದಿ ಹೇಳುತ್ತೀರಿ ನೀವು, ಯಾರಿಗೆ ಉಪದೇಶ ಮಾಡ್ತೀರಾ? ಇದರ ಬಗ್ಗೆ ಗೃಹ ಇಲಾಖೆ ಒಂದು ಕ್ರಮ ತೆಗೆದುಕೊಳ್ಳಬೇಕು. ಯಾರು ಇದ್ದಾರೆ ಎನ್ನುವುದು ಆ ಮೇಲೆ ಮೊದಲು ಕ್ರಮ ಆಗಬೇಕು, ಅದು ಯಾರಾದರೂ ಆಗಲಿ ಎಂದು ಸುನೀಲ್ ಕುಮಾರ್ ವಾಗ್ದಾಳಿ ನಡೆಸಿದರು.
ವಿರೋಧಿಗಳನ್ನು, ಸ್ವಪಕ್ಷೀಯರನ್ನು ಹತ್ತಿಕ್ಕಲು ಬೇರೆ ಮಾರ್ಗ ಇಲ್ಲವೇ, ಇದರ ಬಗ್ಗೆ ಎಲ್ಲರೂ ಒಂದುಗೂಡಿ ಕೈ ಜೋಡಿಸಬೇಕು. ಈ ಸರ್ಕಾರ ಅಪರಾಧಿಗಳಿಗೆ ಒಂದು ಸಿಂಹಸ್ವಪ್ನ ಆಗಿದೆ ಎಂಬ ಸಂದೇಶ ಕಳಿಸಿ ಎಂದು ಒತ್ತಾಯಿಸಿದರು. ಯಾರು ಬೇಕಾದರೂ ಏನು ಬೇಕಾದರೂ ಮಾಡಬಹುದು ಎನ್ನುವಂತದ್ದು ಬೇಡ. ಸಮಾಜಘಾತುಕ ಚಟುವಟಿಕೆ ಮಾಡಿದ್ರೆ ಸಾಸಿವೆ ಕಾಳಷ್ಟು ಸಹಿಸಲ್ಲ ಎಂದು ಕ್ರಮದ ಮೂಲಕ ತಿಳಿಸಿ ಎಂದರು.
ಗೃಹ ಇಲಾಖೆ ನಡೆಸಲು ಇಷ್ಟ ಇಲ್ಲವಾ, ಅಥವಾ ಇಲಾಖೆಯಲ್ಲಿ ಯಾರಾದರೂ ಕೈ ಆಡಿಸುತ್ತಿದ್ದಾರಾ, ಇಲಾಖೆ ನಡೆಸಲು ಗೃಹ ಸಚಿವರಿಗೆ ಸ್ವಾತಂತ್ರ್ಯ ಇಲ್ಲವಾ ಎಂದು ವಾಗ್ದಾಳಿ ನಡೆಸಿದರು.