ಇತ್ತೀಚೆಗೆ ಹುಬ್ಬಳ್ಳಿ ಪೊಲೀಸರು ಬಂಧಿಸುವಾಗ ವಿವಸ್ತ್ರಗೊಳಿಸಿರುವ ಆರೋಪ ಪ್ರಕರಣದಲ್ಲಿ ಸುದ್ದಿಯಾಗಿದ್ದ ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ಎಂಬಾಕೆಗೆ ಸಂಬಂಧಿಸಿದ ಹಳೆಯ ವೀಡಿಯೊವೊಂದು ವೈರಲ್ ಆಗಿದೆ. ಆಕೆಯ ನಿಜವಾದ ಬಣ್ಣ ಬಯಲುಗೊಳಿಸುತ್ತಿದೆ.
ಸುಜಾತಾ ಹಣಕ್ಕಾಗಿ ಹನಿಟ್ರ್ಯಾಪ್ ಮಾಡುವ ದಂಧೆ ಮಾಡುತ್ತಿದ್ದು, ಸಂತ್ರಸ್ತ ಪುರುಷರ ಮೇಲೆ ಮೃಗೀಯವಾಗಿ ವರ್ತಿಸಿರುವುದು ಎನ್ನಲಾದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಳೆಯ ವೀಡಿಯೊಗಳುಬೆಚ್ಚಿ ಬೀಳಿಸುವಂತಿವೆ. 2023ರ ನವೆಂಬರ್ 12ರಂದು ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಸುಜಾತಾ ಮತ್ತು ಸಹಚರರ ವಿರುದ್ಧ ಪ್ರಕರಣ ದಾಖಲಾಗಿತ್ತು ತುಕಾರಾಮ್ ಎಂಬ ವ್ಯಕ್ತಿಯನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಿದ್ದ ಸುಜಾತಾ ಮತ್ತು ಗ್ಯಾಂಗ್ ಆತನನ್ನು ಅಪಹರಿಸಿ ನಾಲ್ಕು ದಿನ ಅಕ್ರಮವಾಗಿ ಕೂಡಿಹಾಕಿತ್ತು. ತುಕಾರಾಮ್‌ನನ್ನು ವಿವಸ್ತ್ರಗೊಳಿಸಿ ನೈಲಾನ್ ಹಗ್ಗ ಹಾಗೂ ಲಾಂಗ್‌ನಿಂದ ಹಲ್ಲೆ ನಡೆಸಿತ್ತು.
ವೀಡಿಯೊದಲ್ಲಿ ತುಕಾರಾಮ್ ‘ಅಮ್ಮಾ, ತಾಯಿ ಬಿಟ್ಟುಬಿಡು’ ಎಂದು ಕಾಲಿಗೆ ಬಿದ್ದರೂ ಸುಜಾತಾ ಬಟ್ಟೆ ಬಿಚ್ಚಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಕೈಯಲ್ಲಿ ಲಾಂಗ್ ಹಿಡಿದು ಬೆದರಿಸಿ ಆತನಿಂದ 1.84 ಲಕ್ಷ ರೂಪಾಯಿ ವಸೂಲಿ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಪ್ರಕರಣ ಸಂಬಂಧ ಪೊಲೀಸರು ಸುಜಾತಾ ಮತ್ತು ಸಹಚರರನ್ನು ಬಂಧಿಸಿದ್ದರು. ಆಕೆ ಜಾಮೀನಿನ ಮೇಲೆ ಹೊರಗಿದ್ದು, ಈಗ ಅದೇ ಹಳೆಯ ವೀಡಿಯೊದ ಮುಂದುವರಿದ ಭಾಗ ವೈರಲ್ ಆಗ್ತಿದೆ. ರಾಜಕೀಯ ಪಕ್ಷದ ಹಿನ್ನೆಲೆ ಇಟ್ಟುಕೊಂಡು ಹೀಗೆ ಮೃಗೀಯ ಕೃತ್ಯ ಎಸಗುತ್ತಿರುವ ಆಕೆಯ ವಿರುದ್ಧ ಕಠಿಣ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ ಕೇಳಿಬಂದಿದೆ.


