Thursday, December 18, 2025
Menu

ಹಣವಿದ್ದವರ ಸ್ನೇಹ, ಸೆಕ್ಸ್‌, ಬ್ಲ್ಯಾಕ್‌ಮೇಲ್‌: ಪ್ರೀತ್ಸೆಂದು ಇನ್ಸ್​ಪೆಕ್ಟರ್‌ಗೆ ಕಾಡಿದ ವನಜಾಳ ಜೀವನ

ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್ ಸತೀಶ್ ಬಳಿ ತನ್ನನ್ನು ಪ್ರೀತಿಸು ಎಂದು ಪೀಡಿಸಿ ಬ್ಲ್ಯಾಕ್‌ಮೇಲ್‌ಗೆ ಯತ್ನಿಸಿದ ವನಜಾಳನ್ನು ಪೊಲೀಸರು ವಿಚಾರಣೆ ನಡೆಸಿದಾಗ ಹಲವು ಆತಂಕಕಾರಿ ಮಾಹಿತಿಗಳು ಹೊರ ಬಂದಿವೆ.

ಇನ್ಸ್​ಪೆಕ್ಟರ್ ಸತೀಶ್ ದಾಖಲಿಸಿದ್ದ ಎಫ್​ಐಆರ್ ಆಧರಿಸಿ ಆಕೆಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಹಣ ಇರುವ ವ್ಯಕ್ತಿಗಳನ್ನು ಗುರುತಿಸಿ ಸ್ನೇಹ ಮಾಡಿ ಮನೆಗೆ ಊಟಕ್ಕೆ ಆಹ್ವಾನಿಸಿ ಅವರೊಂದಿಗೆ ಲೈಂಗಿಕ ಸಂಪರ್ಕ ಮಾಡಿ ಪೋಟೊ ಹಾಗೂ ವೀಡಿಯೊಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ಹಣ, ಚಿನ್ನಾಭರಣ ಕಸಿದುಕೊಳ್ಳುತ್ತಿದ್ದಳು ಎಂಬ ವಿಚಾರ ಬಯಲಾಗಿದೆ.

ಸತೀಶ್ ರೆಡ್ಡಿ ಎಂಬ ಗುತ್ತಿಗೆದಾರನನ್ನು ಹನಿಟ್ರ್ಯಾಪ್‌ಗೆ ಬೀಳಿಸಿ ಮೊದಲ ಹಂತದಲ್ಲಿ ಮೂರು ಲಕ್ಷ ರೂಪಾಯಿ, ಚಿನ್ನದ ಸರ, ಬ್ರೇಸ್ಲೆಟ್ ಹಾಗೂ ಉಂಗುರ ಪಡೆದುಕೊಂಡಿದ್ದಳು. ಈ ಸಂಬಂಧ 2022ರಲ್ಲಿ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸತೀಶ್ ರೆಡ್ಡಿ ಅವರ ಎರಡು ಅಂತಸ್ತಿನ ಕಟ್ಟಡವನ್ನು ಲಪಟಾಯಿಸಲು ಯತ್ನಿಸಿದ್ದ ಆರೋಪದ ಮೇಲೆ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ಇದೇ ರೀತಿ ಹಲವರನ್ನು ಹನಿಟ್ರ್ಯಾಪ್‌ಗೆ ಬೀಳಿಸಲು ಯತ್ನಿಸಿರುವ ಆರೋಪವೂ ಆಕೆಯ ಮೇಲಿದೆ.

ವನಜಾ ವಿರುದ್ಧ ಪೊಲೀಸ್ ಅಧಿಕಾರಿಗಳನ್ನೂ ಬ್ಲ್ಯಾಕ್‌ಮೇಲ್ ಮಾಡಿದ ಆರೋಪಗಳಿವೆ. 2018ರಲ್ಲಿ ದಾವಣಗೆರೆಯ ಹೆಡ್ ಕಾನ್ಸ್‌ಟೇಬಲ್ ಜಗದೀಶ್‌ ವಿರುದ್ಧ ಮದುವೆ ನೆಪದಲ್ಲಿ ವಂಚನೆ ಮಾಡಿದ್ದಾಗಿ ವೈಟ್‌ಫೀಲ್ಡ್ ಠಾಣೆಯಲ್ಲಿ ದೂರು ನೀಡಿದ್ದಳು. ತನಿಖೆಯಲ್ಲಿ ಅದು ಸುಳ್ಳು ದೂರು ಎಂದು ಸಾಬೀತಾಗಿ ಪೊಲೀಸರು ಬಿ-ರಿಪೋರ್ಟ್ ಸಲ್ಲಿಸಿದ್ದರು.

ಇತ್ತೀಚೆಗೆ ರಾಮಮೂರ್ತಿ ನಗರ ಪೊಲೀಸ್ ಇನ್‌ಸ್ಪೆಕ್ಟರ್ ಸತೀಶ್ ಅವರಲ್ಲಿ ಪ್ರೀತಿಸು ಎಂದು ನಿರಂತರ ಕಾಟ ನೀಡಿದ ಪ್ರಕರಣದಲ್ಲಿ ಆಕೆಯನ್ನು ಬಂಧಿಸಲಾಗಿದ್ದು, ಪೊಲೀಸ್ ಅಧಿಕಾರಿ ಪತ್ನಿ ಎಂದು ಹೇಳಿಕೊಂಡು ಹಲವರನ್ನು ಬೆದರಿಸಿದ್ದಾಳೆ ಎಂಬ ಆರೋಪವೂ ಕೇಳಿ ಬಂದಿದೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ತನಗೆ ಪರಿಚಯ ಎಂದು ಹೇಳಿಕೊಂಡು ಇನ್​​ಸ್ಪೆಕ್ಟರ್​​ ಸತೀಶ್‌ಗೆ ಪ್ರೀತಿಸು ಎಂದು ಪೀಡಿಸಿದ್ದಳು. ಮೋಟಮ್ಮ ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರೊಂದಿಗೆ ಇರುವ ಪೋಟೋಗಳನ್ನೂ ಕಳುಹಿಸಿದ್ದಳು ಎಂಬುದು ಪತ್ತೆಯಾಗಿದೆ.

ಪೊಲೀಸರು ಆಕೆಯ ವಿರುದ್ಧ ದಾಖಲಾಗಿರುವ ಎಲ್ಲ ಪ್ರಕರಣಗಳ ತನಿಖೆ ನಡೆಸುತ್ತಿದ್ದು, ವಂಚನೆಗೆ ಒಳಗಾದ ಇತರ ಸಂತ್ರಸ್ತರು ಇದ್ದಾರೆಯೇ ಎಂಬ ಬಗ್ಗೆ ಪರಿಶೀಲಿಸುತ್ತಿದ್ದಾರೆ.

Related Posts

Leave a Reply

Your email address will not be published. Required fields are marked *