Menu

ನೆರೆ ಸಂತ್ರಸ್ತರಿಗೆ ಬದುಕು ಕಟ್ಟಿಕೊಡಲು ಸರ್ಕಾರ ಮತ್ತು ಅಧಿಕಾರಿಗಳ ಪ್ರಾಮಾಣಿಕ ಕಾರ್ಯ ನಿರ್ವಹಣೆ ಅಗತ್ಯ

ನೆರೆ ಸಂತ್ರಸ್ತರ ನಿಜವಾದ ಬವಣೆಯನ್ನು ಅರಿತು ಸರ್ಕಾರ ಮತ್ತು ಸಂತ್ರಸ್ತ ಪರಿಹಾರ ಕಾರ್ಯದಲ್ಲಿ ತೊಡಗಿದ ಪ್ರತಿಯೋರ್ವ ಅಧಿಕಾರಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕಿದೆ. ರಾಜ್ಯದ ಉತ್ತರ ಭಾಗದಲ್ಲಿ ಭಾರಿ ಮಳೆ. ಇದರಿಂದ ಅಪಾರ ಆಸ್ತಿ -ಪಾಸ್ತಿ ನಷ್ಟ. ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಭೀಮಾ ಮತ್ತು ಮಲಪ್ರಭಾ ಮತ್ತು ಕೃಷ್ಣಾ ನದಿಗಳು ಉಕ್ಕೇರಿ ಹರಿದ ಪರಿಣಾಮವಾಗಿ ಅನ್ನದಾತರು ಬೆಳೆದ ಕಬ್ಬು ಮತ್ತು ಭತ್ತ ಜೋಳ ಹಾಗೂ ತೊಗರಿ ಬೆಳೆಗೆ ತೀವ್ರ ಹಾನಿ. ಅಲ್ಲದೆ ಇವರ ಮನೆ ಮತ್ತು ಜಾನುವಾರುಗಳಿಗೂ ಈಗ ಸೂಕ್ತ ನೆಲೆಯಿಲ್ಲ.ಇತ್ತ ಸೂರು, ಅತ್ತ ಬೆಲೆಬಾಳುವ ಮನೆ ಮತ್ತು ಜಾನುವಾರುಗಳನ್ನು ಕಳೆದುಕೊಂಡವರ ಬದುಕೇ ಇಂದು ಇಲ್ಲಿ ಅಯೋಮಯ !

ಕಳೆದ ಎರಡುವಾರಗಳ ಅವಧಿಯಿಂದಲೂ ಬೀದರ್. ಕಲಬುರಗಿ ಸುತ್ತಮುತ್ತಲೂ ರಣಭೀಕರ ಮಳೆ. ಬೀಮಾ ಮತ್ತು ಕೃಷ್ಣಾ ನದಿಗಳ ಒಳಹರಿವು ಗರಿಷ್ಟ ಪ್ರಮಾಣದಲ್ಲಿದ್ದ ಕಾರಣ ಈಗಿಲ್ಲಿ ಸಂಭವಿಸಿರುವ ನಷ್ಟದ ಪ್ರಮಾಣವೂ ಅಧಿಕವಾಗಿದೆ. ಇನ್ನೂ ಈ ಪ್ರದೇಶಗಳಲ್ಲಿ ಸಾಮಾನ್ಯ ವಾತಾವರಣ ನೆಲೆಸಿಲ್ಲ ಮುಂದಿನ ಎರಡು ಮೂರು ದಿನಗಳಲ್ಲಿ ಇಲ್ಲಿ ಮತ್ತೆ ಭೀಕರ ಮಳೆಯಾಗುವ ನಿರೀಕ್ಷೆಯಿದೆ.ಈಗಾಗಲೇ ಇಲ್ಲಿ ಪ್ರವಾಹ ಮತ್ತು ಭೀಕರ ಮಳೆಯ ಪರಿಣಾಮವಾಗಿ ಆಗಿರುವ ಹಾನಿ ಆಧಿಕವಾಗಿದ್ದು, ಇದೇ ಮಳೆಯ ಪರಿಸ್ಥಿತಿ ಮುಂದುವರಿದರೆ ಇಲ್ಲಿನ ಜನತೆ ಮತ್ತಷ್ಟು ಸಂಕಷ್ಟಕ್ಕೆ ಈಡಾಗುವುದರಲ್ಲಿ ಸಂದೇಹವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೀಗ ಈ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಇಲ್ಲಿನ ಜನ ಜಾನುವಾರುಗಳಿಗೆ ಆಗಿರುವ ಹಾನಿಯನ್ನು ಮುಖ್ಯಮಂತ್ರಿ ಖುದ್ದು ಪರಿಶೀಲಿಸಿದ್ದಾರೆ. ಇದರ ಬಳಿಕ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಜಿಲ್ಲಾಡಳಿತವೂ ಈ ದಿಶೆಯಲ್ಲಿ ಸಮೀಕ್ಷೆ ನಡೆಸಿದೆ.

ಮಳೆ ಸಂತ್ರಸ್ತರ ಪರಿಹಾರ ನೀಡಿಕೆ ವಿಚಾರದಲ್ಲಿ ಯಾವ ರಾಜಕೀಯ ಮತ್ತು ತಾರತಮ್ಯ ಸಲ್ಲದು. ಮಳೆಪೀಡಿತ ಪ್ರದೇಶಗಳಲ್ಲಿ ಈಗ ಸಂಬಂಧಪಟ್ಟಅಧಿಕಾರಿಗಳು ಯಾವ ರೀತಿಯಲ್ಲಿ ಬೆಳೆಹಾನಿ ಮತ್ತು ರೈತರಿಗೆ ಆಗಿರುವ ಹಾನಿಯನ್ನುಕಲೆ ಹಾಕುವರೆಂಬ ವಿಚಾರದಲ್ಲಿ ಭಿನ್ನಮತವಿದೆ. ಅಲ್ಲದೆ ಕೆಲ ಸಂತ್ರಸ್ತರಿಗೆ ಅಧಿಕಾರಿಗಳು ಸರಿಯಾದ ಮತ್ತು ಸೂಕ್ತ ಪರಿಹಾರವನ್ನು ನಿಗದಿಗೊಳಿಸುತ್ತಿಲ್ಲ ಎಂಬ ಅಪಸ್ವರವಿದೆ. ನೆರೆ ಮತ್ತು ಬರ ಬಂದಾಗ ಸರ್ಕಾರಿ ಅಧಿಕಾರಿಗಳಿಗೆ ಹಬ್ಬವೋ ಹಬ್ಬ ಎಂಬ ಮಾತಿದೆ. ಈ ಮಾತಿನಲ್ಲಿ ಅತಿಶಯವೇನೂ ಇಲ್ಲ. ಸಂತ್ರಸ್ತರಿಗೆಂದು ಸರ್ಕಾರದಿಂದ ಮಂಜೂರಾದ ಆಹಾರದ ಕಿಟ್ ಔಷಧಿ ಸಾಮಗ್ರಿ ಮತ್ತು ಬೆಟ್‌ಶೀಟ್ ಇತ್ಯಾದಿ ಸರ್ಕಾರಿ ಅಧಿಕಾರಿಗಳ ಮನೆ ಸೇರುವುದೆಂಬ ಸಾರ್ವತ್ರಿಕ ಆರೋಪವಿದೆ. ಇಂತಹ ಆರೋಪಗಳಲ್ಲಿ ಹುರುಳಿಲ್ಲ ಎನ್ನಲಾಗದು.

ನೆರೆ ಸಂತ್ರಸ್ತರ ನಿಜವಾದ ಬವಣೆಯನ್ನು ಅರಿತು ಸರ್ಕಾರ ಮತ್ತು ಸಂತ್ರಸ್ತ ಪರಿಹಾರ ಕಾರ್ಯದಲ್ಲಿ ತೊಡಗಿದ ಪ್ರತಿಯೋರ್ವ ಅಧಿಕಾರಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕಿದೆ. ಮಳೆಯಿಂದ ಮನೆ ಮತ್ತು ಜನ ಜಾನುವಾರು ಕಳೆದುಕೊಂಡವರು ತಮ್ಮ ಕುಟುಂಬ ಸಮೇತ ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಗುಳೇ ಬಂದು ಕೂಲಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹತ್ತಾರು ನೀರಾವರಿ ಜಮೀನು ಹೊಂದಿರುವರ ರೈತನ ದಯನೀಯ ಪರಿಸ್ಥಿತಿ ಇದು. ಇಂತಹ ನೂರಾರು ಕುಟುಂಬಗಳ ಕಣ್ಣೀರು ಒರೆಸುವ ಹೊಣೆಗಾರಿಕೆ ಸರ್ಕಾರದ್ದು.

Related Posts

Leave a Reply

Your email address will not be published. Required fields are marked *