ಬೆಂಗಳೂರು: ಕರ್ನಾಟಕದ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾಒಕ್ಕೂಟದಿಂದ 49 ಅಸ್ಪಶ್ಯ ಅಲೆಮಾರಿ ಸಮುದಾಯಗಳು ಮತ್ತು 10 ಸೂಕ್ಷ್ಮ ಪರಿಶಿಷ್ಟ ಜಾತಿಗಳ ಮಹಾಒಕ್ಕೂಟದಿಂದ ಶೇ ಒಂದರಷ್ಟು ಮೀಸಲಾತಿ ಕಲ್ಪಿಸುವಂತೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ‘ಬೆಂಗಳೂರು ಚಲೋ’ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಪ್ರಧಾನ ಸಂಚಾಲಕರಾದ ಕೆ. ವೀರೇಶ್,ಬಸವರಾಜ ನಾರಾಯಣಕರ್ ಮಾತನಾಡಿ, ರಾಜ್ಯದಲ್ಲಿ ಒಳಮೀಸಲಾತಿಯನ್ನು ಜಾರಿಗೆ ತರುವ ಸಲುವಾಗಿ ನ್ಯಾಯಮೂರ್ತಿ ನಾಗಮೋಹನ್ ದ ಆಯೋಗವು 49 ಅಲೆಮಾರಿ ಸಮುದಾಯಗಳನ್ನು ಪ್ರತ್ಯೇಕವಾಗಿ ಗುರುತಿಸಿ, ಇವುಗಳ ಜೊತೆಗೆ ಇನ್ನೂ ಹತ್ತು ಸೂಕ್ಷ್ಮ ಪರಿಶಿಷ್ಟ ಜಾತಿ ಸಮುದಾಯಗಳನ್ನು ಸೇರ್ಪಡೆ ಮಾಡಿ ಶೇ 1%ರಷ್ಟು ನಿಗದಿ ಮಾಡಿತ್ತು, ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ಏಕವ್ಯಕ್ತಿ ಆಯೋಗದ ವರದಿಯು ಅಲೆಮಾರಿಗಳಂತಹ ಕಳಸಮುದಾಯಗಳಲ್ಲಿ ಆಶಾವಾದವನ್ನು ಹುಟ್ಟಿಸಿತ್ತು.
ನಾಗಮೋಹನ್ ದಾಸ್ ಆಯೋಗವು ಪರಿಶಿಷ್ಟ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ದತ್ತಾಂಶಗಳನ್ನು ಸಂಗ್ರಹಿಸಿ ಮೀಸಲಾತಿಯನ್ನು ಹಂಚುವ ವೈಜ್ಞಾನಿಕ ವರದಿಯನ್ನು ಸರಕಾರಕ್ಕೆ ಸಲ್ಲಿಸಿತ್ತು, ಅಡಿಯನ್, ಅಜಿಲಾ, ಬುಡ್ಗ ಜಂಗಮ, ಸುಡುಗಾಡು ಸಿದ್ಧ, ಹಂದಿಜೋಗಿ, ದಕ್ಕಲ, ಡೊಂಬರ, ಸಿಲ್ಲೇಕ್ಯಾತ, ಸಿಂಧೋಳ ಸೇರಿದಂತೆ 49 ಅಲೆಮಾರಿ ಸಮುದಾಯಗಳು ಮತ್ತು 10 ಸೂಕ್ಷ್ಮ ಪರಿಶಿಷ್ಟ ಜಾತಿಗಳನ್ನು ಒಳಗೊಂಡಂತೆ 59 ಸಮುದಾಯಗಳಿಗೆ ಶೇ 1% ರಷ್ಟು ಮೀಸಲಾತಿ ಪ್ರಮಾಣವನ್ನು ನಿಗದಿ ಮಾಡಿತ್ತು,ಆದರೆ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಈ ಎಲ್ಲ ಸಮುದಾಯವನ್ನು ಸಿ ಗ್ರೂಪಿಗೆ ಸೇರಿಸುವ ಮೂಲಕ ಪ್ರಬಲ ಸಮುದಾಯಗಳ ಜತೆ ಪೈಪೋಟಿ ನೀಡುವ ವಾತವರಣ ಸೃಷ್ಟಿಸಿದ್ದಾರೆ ಎಂದು ಹೇಳಿದರು.
ಮೀಸಲಾತಿ ಒಳವರ್ಗೀಕರಣದ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ತತ್ವಗಳನ್ನು ಸರಕಾರ ಗಮನಿಸಬೇಕಿತ್ತು. ಆದರೆ ಸರಕಾರವಾಗಲಿ, ಕ್ಯಾಬಿನೆಟ್ ಆಗಲಿ ನಾಗಮೋಹನ್ ದಾಸ್ ಆಯೋಗದ ಶಿಫಾರಸುಗಳನ್ನು ಮತ್ತು ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ತೀರ್ಪನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಜನಸಂಖ್ಯೆಯನ್ನು ಆಧರಿಸಿ ಮೀಸಲಾತಿಯ ಪಾಲನ್ನು ಹಂಚುವ ನಿರ್ಣಯವನ್ನು ಕ್ಯಾಬಿನೆಟ್ ಮಾಡಿದೆ.
ಈ ಕಾರಣದಿಂದಾಗಿ ಸಾಮಾಜಿಕ ನ್ಯಾಯವೂ ಪರಿಪಾಲನೆಯಾಗಿಲ್ಲ, ಸರಕಾರದ ಈ ನಿರ್ಣಯವನ್ನು ಮತ್ತೊಮ್ಮೆ ಪರಿಶೀಲಿಸಬೇಕೆಂದು ಮುಖ್ಯಮಂತ್ರಿಯವರಲ್ಲಿ 49 ಅಲೆಮಾರಿ ಸಮುದಾಯಗಳ ಮುಖಂಡರು ನಿಯೋಗದಲ್ಲಿ ತೆರಳಿ ಮನವಿ ಮಾಡಿಕೊಂಡಿದ್ದು ಆದರೆ ಸರಕಾರದ ಕಡೆಯಿಂದ ಯಾವ ಧನಾತ್ಮಕ ಪ್ರತಿಕ್ರಿಯೆ ಇಲ್ಲಿಯವರೆಗೂ ಲಭ್ಯವಾಗಿಲ್ಲ. ಈ ಕಾರಣಕ್ಕಾಗಿ ನಾಳೆ 3ರಂದು ಕರ್ನಾಟಕದ ಎಲ್ಲ ಅಲೆಮಾರಿ ಸಮುದಾಯಗಳ ಸಂಘಟನೆಗಳಿಂದ ಬೃಹತ್ ಪ್ರತಿಭಟನ ಸಮಾವೇಶ ಹಮ್ಮಿಕೊಳಲಾಗಿದೆ ಎಂದು ತಿಳಿಸಿದರು.
ಸಮಾವೇಶದಲ್ಲಿ ಅಲೆಮಾರಿ ಸಮುದಾಯಗಳ ಪ್ರತಿಭಾವಂತ ಕಲಾವಿದರು. ಪದ್ಮಶ್ರೀ ಪ್ರಸಸ್ತಿ, ರಾಜ್ಯೋತ್ಸ ಪ್ರಶಸ್ತಿ ಪಡೆದ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಈ ಸಮಾವೇಶದಲ್ಲಿ ಖ್ಯಾತ ಚಿಂತಕರಾದ ಡಾ. ಬಂಜಗೆರೆ ಜಯಪ್ರಕಾಶ, ಶ್ರೀ ಶಿವಸುಂದರ್, ವಡ್ಡಗೆರೆ ನಾಗರಾಜಯ್ಯ, ಹುಲಿಕುಂಟೆಮೂರ್ತಿ, ಅಂಬಣ್ಣ ಆರೋಲಿಕರ್ ಅವರಂತಹ ಚಿಂತಕರು ಪಾಲ್ಗೊಳ್ಳಲಿದ್ದಾರೆ.
ಒಳಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ಮತ್ತು ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಯ ಕುರಿತು ಚಿಂತನ ಮಂಥನಗಳು ನಡೆಯಲಿವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶೇಷಪ್ಪ, ಚಿನ್ನು,ಬಿ.ಹೆಚ್. ಮಂಜುನಾಥ್, ಲೋಹಿತಾಕ್ಷ.ಶಿವಕುಮಾರ್ ವೈ ಬಳ್ಳಾರಿ, ವೆಂಕಟರಮಣಯ್ಯ, ರಾಜೇಂದ್ರ, ಮಹಾಂತೇಶ್ ಸಂಕಲ್ ಮತ್ತಿತರರು ಭಾಗವಹಿಸಿದ್ದರು.