ಬೆಂಗಳೂರಿನ ತಿಲಕ್ ನಗರದಲ್ಲಿ ಮನೆಗೆ ಊಟಕ್ಕೆ ಕರೆದು ಬಿಸಿಎ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಸಂಬಂಧ ಆರೋಪಿಯಾಗಿರುವ ಖಾಸಗಿ ಕಾಲೇಜಿನ ವಿಭಾಗವೊಂದರ ಮುಖ್ಯಸ್ಥನನ್ನು ಪೊಲೀಸರು ಬಂಧಿಸಿದ್ದಾರೆ.
ಸಂಜೀವ್ ಕುಮಾರ್ ಮಂಡಲ್ ಬಂಧಿತ. ಆತ ಖಾಸಗಿ ಕಾಲೇಜಿನ ಹೆಡ್ ಆಫ್ ಡಿಪಾರ್ಟ್‌ಮೆಂಟ್. ಅಕ್ಟೋಬರ್ 2 ರಂದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಸಂತ್ರಸ್ತೆ ಆರೋಪಿಸಿದ್ದಾರೆ. ಕುಟುಂಬದೊಂದಿಗೆ ಊಟ ಮಾಡೋಣ ಬಾ ಎಂದು ವಿದ್ಯಾರ್ಥಿನಿಯನ್ನು ಆರೋಪಿ ಮನೆಗೆ ಕರೆಸಿಕೊಂಡಿದ್ದ.
ಆದರೆ ವಿದ್ಯಾರ್ಥಿನಿ ಮನೆಗೆ ಹೋದಾಗ ಅಲ್ಲಿ ಯಾರೂ ಇರಲಿಲ್ಲ, ಫ್ಯಾಮಿಲಿ ಜೊತೆಗೆ ಊಟಕ್ಕೆ ಎಂದಿದ್ದ ಮಂಡಲ್, ಆದರೆ ಮನೆಯಲ್ಲಿ ಒಬ್ಬನೇ ಇದ್ದುದನ್ನು ಕಂಡು ಹೆದರಿ ವಾಪಸ್ ಹೋಗಲು ವಿದ್ಯಾರ್ಥಿನಿ ಮುಂದಾಗಿದ್ದಳು. ಆಗ ಆರೋಪಿಯು’ನಿನಗೆ ಹಾಜರಾತಿ ಕಡಿಮೆ ಇದೆ, ಮಾರ್ಕ್ಸ್ ಕಡಿಮೆ ಬರುತ್ತೆ. ಸಹಕರಿಸಿದರೆ ಫುಲ್ ಮಾರ್ಕ್ಸ್ ಕೊಡ್ತೀನಿ ಎಂದು ಒತ್ತಾಯಿಸಿ ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದ ಎಂದು ಆರೋಪಿಸಲಾಗಿದೆ.
ವಿದ್ಯಾರ್ಥಿನಿಯು ಸ್ನೇಹಿತೆಯ ಕರೆ ಬಂದಿದೆ ಎಂದು ನೆಪ ಹೇಳಿ ಅಲ್ಲಿಂದ ತಪ್ಪಿಸಿಕೊಂಡಿದ್ದಾಳೆ. ನಂತರ ಪೋಷಕರಿಗೆ ವಿಷಯ ತಿಳಿಸಿ ತಿಲಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪೊಲೀಸರು ಸಂಜೀವ್ ಕುಮಾರ್ ಮಂಡಲ್‌ನನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.