ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ರಾಮಯ್ಯನಪಾಳ್ಯ ಬಳಿ ಹಿಟ್ ಅಂಡ್ ರನ್‌ಗೆ ಬೈಕ್ ಸವಾರರಿಬ್ಬರು ಬಲಿಯಾಗಿದ್ದಾರೆ. ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ನಲ್ಲಿದ್ದ ಇಬ್ಬರು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ತೂಬಗೆರೆ ನಿವಾಸಿ ನಂದನ್ ಕುಮಾರ್(22) ಮತ್ತು ದೊಡ್ಡತಿಮ್ಮನಹಳ್ಳಿಯ ರವಿಕುಮಾರ್(24) ಮೃತ ಯುವಕರು.
ಮೃತ ಯುವಕರು ದೊಡ್ಡಬಳ್ಳಾಪುರ ನಗರದ ಎಲ್&ಟಿ ಕಂಪನಿ ಸಿಬ್ಬಂದಿ ಎಂಬುದಾಗಿ ತಿಳಿದು ಬಂದಿದೆ. ಬೈಕ್ಗೆ ಹಿಂದಿನಿಂದ ವೇಗವಾಗಿ ಬಂದ ಅಪರಿಚಿತ ವಾಹನ ಡಿಕ್ಕಿಯಾಗಿದ್ದು, ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದ ನಂತರ ವಾಹನದೊಂದಿಗೆ ಚಾಲಕ ಪರಾರಿಯಾಗಿದ್ದು, ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಗ್ಯಾಂಗ್ ರೇಪ್ ಪ್ರಮುಖ ಆರೋಪಿ ಸೆರೆ
ಬೆಂಗಳೂರು ಉತ್ತರ ತಾಲೂಕಿನ ಗಂಗೊಂಡನಹಳ್ಳಿ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ಪುರುಷನನ್ನು ಕಟ್ಟಿಹಾಕಿ ಹಲ್ಲೆ ಮಾಡಿ, ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ನಾಪತ್ತೆಯಾಗಿದ್ದ ಪ್ರಕರಣದ ಪ್ರಮುಖ ಆರೋಪಿ ಮಿಥುನ್ ಎಂಬಾತನನ್ನು ನೆಲಮಂಗಲ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ದಾಖಲಾದ ಕೂಡಲೇ ಮಿಥುನ್, ನೆಲಮಂಗಲ ತಾಲೂಕಿನ ಶಿವಗಂಗೆ ಬಳಿ ತಲೆಮರೆಸಿಕೊಂಡಿದ್ದ. ನೆಲಮಂಗಲ ಡಿವೈಎಸ್‌ಪಿ ಜಗದೀಶ್ ನೇತೃತ್ವದ ತಂಡವು ಆರೋಪಿಯನ್ನು ಬಂಧಿಸಿದೆ. ಪ್ರಕರಣದ ಆರು ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.


