Menu

15,000 ರೂ. ಸಂಬಳ ಪಡೆಯುವ ಗುತ್ತಿಗೆ ನೌಕರನ ಬಳಿ 24 ಮನೆ, 30 ಕೋಟಿ ರೂ. ಆಸ್ತಿ!

contractor

24 ಮನೆ, 30 ನಿವೇಶನ, ಅಪಾರ್ಟ್‌ ಮೆಂಟ್‌, 350 ಗ್ರಾಂ ಚಿನ್ನ ಎರಡು ಕಾರು, ಎರಡು ಬೈಕ್, 30 ಎಕರೆ ಜಮೀನು ಹಾಗೂ 20 ಎಕರೆ ಜಮೀನು ಸೇರಿದಂತೆ ಕೋಟ್ಯಂತರ ರೂಪಾಯಿ ಮೌಲ್ಯದ ಸಂಪತ್ತು ಲೋಕಾಯುಕ್ತ ದಾಳಿಯ ವೇಳೆ 15 ಸಾವಿರ ರೂ. ವೇತನ ಪಡೆಯುತ್ತಿದ್ದ ಸಾಮಾನ್ಯ ಗುತ್ತಿಗೆ ನೌಕರನ ಬಳಿ ಪತ್ತೆಯಾಗಿದೆ.

ಕೊಪ್ಪಳದ ಪ್ರಗತಿ ನಗರದಲ್ಲಿನ ಕೆಆರ್ ಐಡಿಎಲ್ ಮಾಜಿ ನೌಕರ ಕಳಕಪ್ಪ ನಿಡಗುಂದಿ ಮನೆಯಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಅಕ್ರಮ ಸಂಪತ್ತು ಪತ್ತೆಯಾಗಿದ್ದುಮ, ಇದರ ಒಟ್ಟಾರೆ ಮೌಲ್ಯಮಾಪನ ನಡೆಯುತ್ತಿದ್ದು, ಸುಮಾರು 30 ಕೋಟಿ ರೂ. ಸಂಪತ್ತು ಆಗಬಹುದು ಎಂದು ಅಂದಾಜಿಸಲಾಗಿದೆ.

ತನಿಖೆ ವೇಳೆ ಲೋಕಾಯುಕ್ತರಿಗೆ ಕಳಕಪ್ಪ ನಿಡಗುಂದಿ ಮನೆಯಲ್ಲಿ, ಕೊಪ್ಪಳ, ಭಾಗ್ಯನಗರ ಸೇರಿ ವಿವಿಧ ಕಡೆ 24 ಮನೆ, ಪ್ರತಿಷ್ಠಿತ ಬಡಾವಣೆಯಲ್ಲಿ ಸುಮಾರು 20 ನಿವೇಶನ, 350 ಗ್ರಾಂ ಚಿನ್ನ ಎರಡು ಕಾರು, ಎರಡು ಬೈಕ್, 30 ಎಕರೆ ಜಮೀನು ಹಾಗೂ 20 ಎಕರೆ ಜಮೀನಿನ ಖರೀದಿ ಕರಾರು ಪತ್ರದ ದಾಖಲೆ ಲಭ್ಯವಾಗಿವೆ. ಈ ಎಲ್ಲ ಆಸ್ತಿ ತಮ್ಮ ಸಹೋದರ, ಪತ್ನಿ ಹಾಗೂ ಪತ್ನಿಯ ತಮ್ಮನ ಹೆಸರಿನಲ್ಲಿವೆ.

ಮೂಲತಃ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಬಂಡಿಹಾಳ ನಿವಾಸಿಯಾಗಿದ್ದ ಕಳಕಪ್ಪ, ಕಳೆದ 20 ವರ್ಷದಿಂದ ಹೊರಗುತ್ತಿಗೆ ನೌಕರನಾಗಿ ಕೆಲಸ ಮಾಡಿದ್ದ. ಕೆಲ ದಿನಗಳ ಹಿಂದೆ ಸೇವೆಯಿಂದ ವಜಾ ಆಗಿದ್ದಾನೆ.‌ ಆರಂಭದಲ್ಲಿ ತೀರಾ ಕಡಿಮೆ ವೇತನಕ್ಕೆ ಕೆಲಸ‌ ಮಾಡಿರುವ ಕಳಕಪ್ಪ, ವಜಾ ಆಗುವ ವೇಳೆಗೆ ತಿಂಗಳಿಗೆ 15 ಸಾವಿರ ಸಂಬಳ ಪಡೆಯುತ್ತಿದ್ದರು. ಈತನ ಮನೆಯಲ್ಲಿ ಇಷ್ಟೊಂದು ಪ್ರಮಾಣದ ಆಸ್ತಿ ಪತ್ರ ಸಿಕ್ಕಿರುವುದು ಲೋಕಾ ಅಧಿಕಾರಿಗಳೇ ಅಚ್ಚರಿಗೊಂಡಿದ್ದಾರೆ.

ಪ್ರಕರಣದ ಹಿನ್ನೆಲೆ:

ಕೊಪ್ಪಳದ ಕೆಆರ್‌ಐಡಿಎಲ್‌ನಲ್ಲಿ ಝಡ್.ಎಂ.ಚಿಂಚೊಳ್ಳಿಕರ ಎಂಬವರು ಇಇ ಆಗಿದ್ದಾಗ, ಸುಮಾರು 100 ಕೋಟಿ ರೂ. ಬೋಗಸ್ ಬಿಲ್ ಎತ್ತುವಳಿ ಮಾಡಲಾಗಿದೆ ಎಂಬ ಆರೋಪ ಕೇಳಿ‌ ಬಂದಿತ್ತು. ‘ಪಬ್ಲಿಕ್ ಟಿವಿ’ ಸುದ್ದಿ ಪ್ರಸಾರ ಮಾಡಿದ ಮೇಲೆ ಅಕ್ರಮ‌ ಸಾಬೀತಾಗಿದೆ. ಈ ಹಿನ್ನೆಲೆ ಇಲಾಖೆ ತನಿಖೆ ನಡೆದು, ಸ್ವತಃ ಕೆಆರ್‌ಐಡಿಎಲ್ ಅಧಿಕಾರಿಗಳು ಆಗಿನ ಇಇ ಝಡ್.ಎಂ.ಚಿಂಚೊಳ್ಳಿಕರ್, ಹೊರ ಗುತ್ತಿಗೆ ನೌಕರ ಕಳಕಪ್ಪ ನಿಡಗುಂದಿ ಹಾಗೂ ಒಬ್ಬ ಗುತ್ತಿಗೆದಾರನ ವಿರುದ್ಧ ಲೋಕಾಯುಕ್ತರಿಗೆ ದೂರು‌ ನೀಡಿದ್ದರು. ಈ ಹಿನ್ನೆಲೆ ಲೋಕಾಯುಕ್ತರು ಭ್ರಷ್ಟಾಚಾರದ ಕಿಂಗ್‌ಪಿನ್ ಕಳಕಪ್ಪ ನಿಡಗುಂದಿ ಮನೆಯಿಂದಲೇ ತನಿಖೆ ಶುರು ಮಾಡಿದ್ದಾರೆ.

ಕೆಆರ್‌ಐಡಿಎಲ್ ಕಚೇರಿಯಲ್ಲಿ ತನಿಖೆ

ಲೋಕಾಯುಕ್ತ ಅಧಿಕಾರಿಗಳು ಒಂದೆಡೆ ಕಳಕಪ್ಪ ನಿಡಗುಂದಿ ಮನೆ ಮೇಲೆ ದಾಳಿ ಮಾಡಿದ್ದರೆ ಮತ್ತೊಂದೆಡೆ ಕೊಪ್ಪಳದ ಕೆಆರ್‌ಐಡಿಎಲ್ ಕಚೇರಿಯಲ್ಲೂ ತನಿಖೆ ಶುರು ಮಾಡಿದ್ದಾರೆ. ಬೆಳಗ್ಗೆಯೇ ಕೆಆರ್‌ಐಡಿಎಲ್ ಕಚೇರಿಗೆ ಆಗಮಿಸಿ ಕಾಯ್ದು ಕುಳಿತಿದ್ದ ಲೋಕಾಯುಕ್ತ ಪೊಲೀಸರು, ಎಇಇ ಆನಂದ ಅವರು ಕಚೇರಿಗೆ ಬಂದ ನಂತರ ಅವರ ಸಹಿ‌ ಪಡೆದು, ತನಿಖೆ ಶುರು ಮಾಡಿದರು. ಲೋಕಾಯುಕ್ತ ಡಿವೈಎಸ್ಪಿ ವಸಂತಕುಮಾರ ನೇತೃತ್ವದಲ್ಲಿ ಪಿಐ ಸುನೀಲ್ ಮ್ಯಾಗಿನಮನಿ, ಚಂದ್ರಪ್ಪ, ವಿಜಯಕುಮಾರ, ನಾಗರತ್ನ, ಶೈಲಾ ಪಾಟೇಕರ್ ಮತ್ತು ಸಿಬ್ಬಂದಿ ತನಿಖೆ ಮಾಡುತ್ತಿದ್ದಾರೆ.

Related Posts

Leave a Reply

Your email address will not be published. Required fields are marked *