ಚಿತ್ರದುರ್ಗದ ಹಿರಿಯೂರು ಬಳಿ ಅಪಘಾತ ನಡೆದು ಹತ್ತಕ್ಕೂ ಹೆಚ್ಚು ಮಂದಿ ಸಜೀವದಹನಗೊಂಡು ಹಲವರು ಗಾಯಗೊಂಡಿರುವ ಘಟನೆಯಲ್ಲಿ ಹಾಸನದ ಇಬ್ಬರು ಯುವತಿಯರ ಸುಳಿವೇ ಸಿಕ್ಕಿಲ್ಲ. ಅವರಲ್ಲಿ ಒಬ್ಬಾಕೆ ನವ್ಯಾಗೆ ಏಪ್ರಿಲ್‌ನಲ್ಲಿ ಮದುವೆ ನಿಗದಿಯಾಗಿದೆ. ಮಗಳ ಬಗ್ಗೆ ಏನಾದರೂ ಮಾಹಿತಿ ಸಿಗುವುದೇ ಎಂದು ತಂದೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಮಗಳ ಪೋಟೊ ಹಿಡಿದುಕೊಂಡು ಅಲೆದಾಡುತ್ತ ಕಣ್ಣಿರು ಹಾಕುತ್ತಿದ್ದಾರೆ.
ಹಾಸನದ ಚನ್ನರಾಯಪಟ್ಟಣ ತಾಲೂಕಿನ ನವ್ಯ ಮತ್ತು ಮಾನಸ ಕಣ್ಮರೆಯಾಗಿದ್ದಾರೆ. ಇವರು ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿರ್‌ಗಳಾಗಿ ಕೆಲಸ ಮಾಡುತ್ತಿದ್ದರು. ಇವರಿಬ್ಬರ ಪೋಷಕರು ಕಣ್ಣೀರಿಡುತ್ತಾ ಮಕ್ಕಳಿಗಾಗಿ ಹುಡುಕಾಡುತ್ತಿದ್ದಾರೆ.
ನವ್ಯ ಮತ್ತು ಮಾನಸ ಅಪಘಾತದ ಬಳಿಕ ಪತ್ತೆಯಾಗಿಲ್ಲ, ಅಂಕನಹಳ್ಳಿಯ ನಿವಾಸಿ ನವ್ಯ ಹಾಗೂ ಚನ್ನರಾಯಪಟ್ಟಣದ ಮಾನಸ ಆತ್ಮೀಯ ಗೆಳತಿಯರು. ಮಲೆನಾಡು ಇಂಜಿನಿಯರಿಂಗ್ ಕಾಲೇಜಿ ನಲ್ಲಿ ಒಟ್ಟಿಗೆ ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿನಲ್ಲಿ ಎಂಟೆಕ್ ಪೂರ್ಣಗೊಳಿಸಿ ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿ ಕೆಲಸ ಮಾಡುತ್ತಿದ್ದರು.
ಅಪಘಾತದ ಸುದ್ದಿ ತಿಳಿದ ತಕ್ಷಣ ನವ್ಯ ತಂದೆ ಮಂಜಪ್ಪ ಹಾಗೂ ಮಾನಸ ತಾಯಿ ದ್ರಾಕ್ಷಾಯಣಿ ಚಿತ್ರದುರ್ಗದ ಹಿರಿಯೂರು ತಾಲೂಕು ಆಸ್ಪತ್ರೆಗೆ ಆಗಮಿಸಿ ಮಕ್ಕಳಿಗಾಗಿ ಹುಡುಕಾಟ ಆರಂಭಿಸಿ ದ್ದಾರೆ. ಪ್ರತಿ ವಾರ್ಡ್, ಬೆಡ್ ಪರಿಶೀಲಿಸುತ್ತ, ಗಾಯಾಳುಗಳ ಪಟ್ಟಿ ನೋಡುತ್ತಾ ಸುಳಿವು ಸಿಗಬಹುದೇನೋ ಎಂಬ ನಿರೀಕ್ಷೆಯಲ್ಲಿದ್ದಾರೆ.
ಬೆಳಿಗ್ಗೆ ಏಳು ಗಂಟೆಗೆ ಇವರಿಬ್ಬರ ಗೆಳತಿ ಮಿಲನಾ ಫೋನ್ ಮಾಡಿದ ಬಳಿಕ ನಮಗೆ ಅಪಘಾತದ ವಿಷಯ ಗೊತ್ತಾಯ್ತು. ರಜೆ ಇತ್ತು ಎಂಬ ಕಾರಣಕ್ಕೆ ಮೂವರೂ ಸಿಗಂದೂರಿಗೆ ಹೊರಟಿದ್ದರು. ನನಗೆ ಒಬ್ಬ ಮಗ ಹಾಗೂ ಒಬ್ಬಳು ಮಗಳು, ಆಕೆಗೆ ಎಪ್ರಿಲ್‌ನಲ್ಲಿ ಮದುವೆ ಫಿಕ್ಸ್ ಆಗಿತ್ತು ಎಂದು ನವ್ಯಾಳ ತಂದೆ ಮಂಜಪ್ಪ ತಿಳಿಸಿದ್ದಾರೆ.
ನವ್ಯ ಜೀವನ ಆರಂಭದ ಸಿದ್ಧತೆಯಲ್ಲಿದ್ದಳು. ಏಪ್ರಿಲ್ 28ರಂದು ನವ್ಯ ಮದುವೆ ನಿಗದಿಯಾಗಿತ್ತು. ನಾವು ಕೂಡ ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೆವು. ಇಂದು ಆಕೆಯ ಫೋಟೊ ಹಿಡಿದು ಆಸ್ಪತ್ರೆಗಳಲ್ಲಿ ಹುಡುಕಾಡಬೇಕಾದ ಸ್ಥಿತಿ ಬಂದಿದೆ ಎಂದು ತಂದೆ ದುಃಖಿಸುತ್ತಿದ್ದಾರೆ.


