ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರಿದಿದ್ದು, 40 ವರ್ಷದ ಹಿಂದೂ ಮಹಿಳೆ ಮೇಲೆ ಇಬ್ಬರು ಅತ್ಯಾಚಾರ ಎಸಗಿ ಮರಕ್ಕೆ ಕಟ್ಟಿಹಾಕಿ ತಲೆಗೂದಲು ಕತ್ತರಿಸಿ ವಿಕೃತಿ ಮೆರೆದಿದ್ದಾರೆ. ಜೆನಿಹಾದಾಹ್ ವಿಭಾಗೀಯ ಜಿಲ್ಲೆಯಾದ ಕಾಲಿಂಗಜ್ ನಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
ಆರೋಪಿಗಳಲ್ಲಿ ಒಬ್ಬನಿಂದ ಮಹಿಳೆ ಕಾಲಿಂಗಜ್ ಮುನ್ಸಿಪಾಲಿಟಿಯಲ್ಲಿ 20 ಲಕ್ಷ ಟಾಕಾ (ಬಾಂಗ್ಲಾ ರೂಪಾಯಿ) ನೀಡಿ ಮೂರಂತಸ್ತಿನ ಕಟ್ಟಡವನ್ನು ಎರಡು ವರ್ಷಗಳ ಹಿಂದೆ ಖರೀದಿಸಿದ್ದರು. ಮನೆ ಖರೀದಿಸಿದಾಗಿನಿಂದ ಆತ ಕಿರುಕುಳ ನೀಡಲು ಆರಂಭಿಸಿದ್ದದ್ದಾಗಿ ತಿಳಿಸಿದ್ದಾರೆ.
ಸಂತ್ರಸ್ತೆಯ ಸಂಬಧಿಕರು ಮನೆಗೆ ಬಂಂದಾಗ ಇಬ್ಬರು ಸೋದರರು ಮನೆಗೆ ನುಗ್ಗಿ ದಾಂಧಲೆ ಮಾಡಿದ್ದು, ಹೆಚ್ಚುವರಿ 50 ಸಾವಿರ ಟಾಕಾ ನೀಡುವಂತೆ ಆಗ್ರಹಿಸಿದರು. ಹೆಚ್ಚುವರಿ ಹಣ ನೀಡಲು ಮಹಿಳೆ ನಿರಾಕರಿಸಿದಾಗ ಮನೆಗೆ ಬಂದಿದ್ದ ಸಂಬಂಧಿಕರ ಮೇಲೆ ಹಲ್ಲೆ ನಡೆಸಿದ್ದಾರೆ.
ಸಂಬಂಧಿಕರ ಮೇಲೆ ಹಲ್ಲೆ ನಡೆಸಿದ ವೇಳೆ ಮಹಿಳೆ ಜೋರಾಗಿ ಕಿರುಚಿಕೊಂಡು ನೆರವು ಕೋರಿದಾಗ ಆಕೆಯನ್ನು ಎಳೆದುಕೊಂಡು ಹೋದ ಇಬ್ಬರು ಮರಕ್ಕೆ ಕಟ್ಟಿ ಹಾಕಿ ಆಕೆಯ ಕೂದಲು ಕತ್ತರಿಸಿದ್ದೂ ಅಲ್ಲದೇ ಅತ್ಯಾಚಾರ ಎಸಗಿದ್ದಾರೆ. ಘಟನೆಯ ವೀಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಹಿಂಸೆ ತಾಳಲಾರದೇ ಮಹಿಳೆ ಪ್ರಜ್ಞೆ ತಪ್ಪಿ ಬಿದ್ದಿದ್ದು, ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ವೈದ್ಯಕೀಯ ಪರೀಕ್ಷೆ ವೇಳೆ ಸತ್ಯ ತಿಳಿದ ಅಧಿಕಾರಿಗಳು ವಿಚಾರಣೆ ನಡೆಸಿದಾಗ ಘಟನೆಯನ್ನು ವಿವರಿಸಿದ ಮಹಿಳೆ, ಶಾಹಿನ್ ಮತ್ತು ಹುಸೇನ್ ಎಂಬ ಇಬ್ಬರ ವಿರುದ್ಧ ದೂರು ನೀಡಿದ್ದಾರೆ.
ಪತ್ರಕರ್ತ ಹಾಗೂ ಕಾರ್ಖಾನೆಯೊಂದರ ಮಾಲೀಕರಾಗಿರುವ ಹಿಂದೂ ವ್ಯಕ್ತಿಗೆ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಹಣೆಗೆ ಗುಂಡಿಟ್ಟು ಕೊಂದಿದ್ದಾರೆ. ಕೊಲೆಯಾದ 45 ವರ್ಷದ ರಾಣಾ ಪ್ರತಾಪ್ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದವು ಎಂದು ಹೇಳಲಾಗಿದೆ. ಬಾಂಗ್ಲಾದಲ್ಲಿ ಅಲ್ಪಸಂಖ್ಯಾತರಾದ ಹಿಂದೂಗಳ ಮೇಲೆ ಸತತವಾಗಿ ದೌರ್ಜನ್ಯ ಮುಂದುವರಿಯುತ್ತಿರುವುದು ಆಘಾತಕಾರಿ ಬೆಳವಣಿಗೆ.
ದಕ್ಷಿಣ ಬಾಂಗ್ಲಾದೇಶದ ಜಾನ್ಸೊರೆ ಜಿಲ್ಲೆಯ ಮಣಿರಾಂಪುರ್ ಪಟ್ಟಣದಲ್ಲಿ ಕೊಪಾಲಿಯಾ ಬಜಾರ್ ನಲ್ಲಿ ರಾಣಾ ಪ್ರತಾಪ್ ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಗೈಯ್ಯಲಾಗಿದೆ. ಔರಾ ಗ್ರಾಮದ ಶಾಲಾ ಶಿಕ್ಷಕರ ಮಗನಾಗಿರುವ ಪ್ರತಾಪ್ ಐಸ್ ಫ್ಯಾಕ್ಟರಿ ಮಾಲೀಕರಾಗಿದ್ದು, ಸ್ಥಳೀಯ ಪತ್ರಿಕೆಯಲ್ಲಿ ಸಂಪಾದಕರಾಗಿಯೂ ಕೆಲಸ ಮಾಡುತ್ತಿದ್ದರು ಎಂದು ಮನೋಹರ್ ಯೂನಿಯನ್ ಪ್ರಸಾದ್ ತಿಳಿಸಿದ್ದಾರೆ.


