ಜನನ ಪ್ರಮಾಣ ಪತ್ರದಲ್ಲಿ ಒಮ್ಮೆ ನಮೂದಿಸಿದ ಹೆಸರನ್ನು ಬದಲಾವಣೆ ಮಾಡುವುದಕ್ಕೆ ಅವಕಾಶ ಕಲ್ಪಿಸುವಂತೆ ಜನನ ಮರಣ ಪ್ರಮಾಣ ನೋಂದಣಿ ಕಾಯಿದೆ 1969ಕ್ಕೆ ತಿದ್ದುಪಡಿ ಮಾಡುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಮಗನ ಹೆಸರು ಬದಲಾವಣೆಗೆ ಅವಕಾಶ ಕಲ್ಪಿಸಲು ಜನನ – ಮರಣ ನೋಂದಣಾಧಿಕಾರಿಗಳಿಗೆ ನಿರ್ದೇಶನ ನೀಡಲು ಕೋರಿ ಮಗುವಿನ ಪೋಷಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ಎಸ್.ಸಂಜಯ್‌ಗೌಡ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದೆ.
ಜನನ ಪ್ರಮಾಣ ಪತ್ರದಲ್ಲಿ ಒಮ್ಮೆ ಹೆಸರನ್ನು ನೋಂದಾಯಿಸಿದ ಬಳಿಕ ಬದಲಾಯಿಸುವ ನಿರ್ಧಾರ ತೆಗೆದುಕೊಳ್ಳುವುದು ಮತ್ತು ಹಲವು ಹೆಸರುಗಳನ್ನು ಇಡು ವುದು ಸಾಮಾನ್ಯ. ಆದರೆ ದಾಖಲೆಗಳಲ್ಲಿ ಒಂದೇ ಹೆಸರನ್ನು ನಮೂದಿಸಲು ಅವಕಾಶವಿರುವ ಕಾರಣ ವ್ಯಕ್ತಿಯನ್ನು ಗುರುತಿಸುವಲ್ಲಿ ಕೆಲವು ಸಂದರ್ಭಗಳಲ್ಲಿ ಗೊಂದಲ ಉಂಟಾಗುತ್ತದೆ. ಹೀಗಾಗಿ ನಾಗರಿಕರು ಬಯಸಿದಾಗ ಹೆಸರು ಬದಲಾವಣೆಗೆ ಅಡ್ಡಿಯಾಗದಂತೆ ತಿದ್ದುಪಡಿ ಮಾಡಬೇಕು. ಹೆಸರು ಬದಲಾಯಿಸಿಕೊಳ್ಳು ವವರ ದಾಖಲೆಗಳನ್ನು ಕೂಡ ಅದೇ ಸಮಯಕ್ಕೆ ಬದಲಾವಣೆಗೆ ಅವಕಾಶ ನೀಡುವ ಕಾರ್ಯವಿಧಾನ ಅನುಷ್ಠಾನಕ್ಕೆ ತರುವಂತೆ ಎಂದು ಪೀಠವು ಸರ್ಕಾರಕ್ಕೆ ಆದೇಶಿಸಿದೆ.
ರಾಜ್ಯ ಕಾನೂನು ಆಯೋಗ 2013ರ ಜುಲೈ 20ರಂದು ಸರ್ಕಾರಕ್ಕೆ ಸಲ್ಲಿಸಿರುವ 24ನೇ ವರದಿಯ ಶಿಫಾರಸುಗಳನ್ನು ಪರಿಗಣಿಸಿ ಕಾಯಿದೆಗೆ ತಿದ್ದುಪಡಿ ಮಾಡುವುದು ಸೂಕ್ತ. ಕಾಯಿದೆ ತಿದ್ದುಪಡಿಯಾಗುವವರೆಗೂ ಈ ನಿರ್ದೇಶನಗಳನ್ನು ಅನುಸರಿಸುವ ಮೂಲಕ ಹೆಸರನ್ನು ಬದಲಾವಣೆಗೆ ಅವಕಾಶ ಮಾಡಿಕೊಡ ಬೇಕು. ಕಾಯಿದೆಯ ಪ್ರಕಾರ ಹೆಸರನ್ನು ತಿದ್ದುಪಡಿ ಮಾಡುವವರೆಗೂ ಪೋಷಕರು ಮಕ್ಕಳ ಹೆಸರನ್ನು ಬದಲಾಯಿಸುವಂತೆ ಕೋರಿ ಅರ್ಜಿ ಸಲ್ಲಿಸಿದಲ್ಲಿ ಪರಿಗಣಿಸು ವುದಕ್ಕೆ ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಜನ್ಮ ದಿನಾಂಕ ಮತ್ತು ಇತರ ವಿವರಗಳು ಬದಲಾವಣೆ ಆಗದೆ ಹೆಸರು ಮಾತ್ರ ಬದಲಾದಲ್ಲಿ ಯಾವುದೇ ರೀತಿಯ ದುರುಪಯೋಗಕ್ಕೆ ಅವಕಾಶ ಇರದು. ಹೀಗಾಗಿ ಹೆಸರು ಬದಲಾಯಿಸಲು ಕೋರಿ ಬಂದ ಅರ್ಜಿಗಳನ್ನು ಅಂಗೀಕರಿಸಬೇಕು ಎಂದು ಪೀಠ ಹೇಳಿದೆ.