ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ನೀತಿ ರೂಪಿಸಲು ಸರ್ಕಾರಕ್ಕೆ ಒಂದು ತಿಂಗಳ ಕಾಲಾವಕಾಶ ನೀಡಲಾಗಿತ್ತು. ಈವರೆಗೆ ಯಾವುದೇ ನೀತಿ ರೂಪಿಸಿಲ್ಲ, ನೀತಿ ರೂಪಿಸುವ ವಿಚಾರದಲ್ಲಿ ಸರ್ಕಾರ ವಿಳಂಬ ತೋರಿದೆ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಬೈಕ್ ಟ್ಯಾಕ್ಸಿ ವಿಚಾರ ಬಿಟ್ಟು ಕೇವಲ ಬೈಕ್‌ಗಳನ್ನು ಡೆಲಿವರಿಗೆ ಬಳಸುವ ಕಾರ್ಮಿಕರ ಬಗ್ಗೆ ಹೇಳುತ್ತಿದ್ದೀರಿ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್, ಸರ್ಕಾರ ಬೈಕ್ ಟ್ಯಾಕ್ಸಿಗಳಿಗೆ ನಿರ್ಬಂಧ ವಿಧಿಸಿರುವುದಕ್ಕೆ ನ್ಯಾಯಾಲಯದಿಂದ ತಡೆ ನೀಡುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದೆ.
ಬೈಕ್ ಟ್ಯಾಕ್ಸಿಗಳ ಕುರಿತು ಸರ್ಕಾರದ ನಿಖರವಾದ ವಾದವೇನು ಎಂಬುದನ್ನು ಮಂಡಿಸುವಂತೆ ಸರ್ಕಾರಕ್ಕೆ ಸೂಚಿಸಿದ ಹೈಕೋರ್ಟ್, ನಂತರ ಸೂಕ್ತ ಆದೇಶ ಹೊರಡಿಸುವುದಾಗಿ ತಿಳಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 15ಕ್ಕೆ ನಿಗದಿಪಡಿಸಿದೆ.
‘ರಾಜ್ಯದಲ್ಲಿ ಪ್ರಯಾಣಿಕರ ಸಾಗಣೆಗಾಗಿ ಬೈಕ್ ಟ್ಯಾಕ್ಸಿಗಳಿಗೆ ಸರ್ಕಾರ ಯಾವುದೇ ಅನುಮತಿಯನ್ನು ನೀಡಿಲ್ಲ’ ಎಂದು ರಾಜ್ಯ ಸರ್ಕಾರದ ಪರ ಎಜಿ ಶಶಿಕಿರಣ್ ಶೆಟ್ಟಿ ಹೈಕೋರ್ಟ್‌ಗೆ ಸ್ಪಷ್ಟಪಡಿಸಿ, ಬೈಕ್ ಟ್ಯಾಕ್ಸಿಗಳ ಬಳಕೆಯನ್ನು ನಿರ್ಬಂಧಿಸಿರುವ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡರು.
ಬೈಕ್‌ಗಳನ್ನು ಪ್ರಯಾಣಿಕರ ಸಾಗಣೆಗಾಗಿ ಟ್ಯಾಕ್ಸಿ ಎಂದು ಬಳಸಲು ಸರ್ಕಾರವು ಅನುಮತಿ ನೀಡಿಲ್ಲ.: ಬೈಕ್‌ಗಳನ್ನು ಡೆಲಿವರಿ ಸೇವೆಗಳಿಗಾಗಿ ಬಳಸಲು ಅವಕಾಶ ನೀಡಲಾಗಿದ್ದು, ಇದಕ್ಕಾಗಿ ಟ್ಯಾಕ್ಸಿ ಎಂದು ನೋಂದಣಿ ಮಾಡಿಸುವ ಅಗತ್ಯವಿಲ್ಲ.ಅನುಮತಿ ಇಲ್ಲದಿದ್ದರೂ ಕೆಲವು ಬೈಕ್ ಟ್ಯಾಕ್ಸಿ ಕಂಪನಿಗಳು ವಾಹನಗಳನ್ನು ಪ್ರಯಾಣಿಕರಿಗಾಗಿ ಬಳಸುತ್ತಿವೆ. ಆ ಕಂಪನಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.