ಬೆಂಗಳೂರು: ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಕೆಆರ್ ನಗರದ ಮಹಿಳೆಯೊಬ್ಬರನ್ನು ಅಪಹರಣ ಪ್ರಕರಣದ ಸಂಬಂಧ ಮಾಜಿ ಸಚಿವ ಎಚ್ ಡಿ ರೇವಣ್ಣನವರ ಪತ್ನಿ ಭವಾನಿಗೆ ಮೈಸೂರಿಗೆ ತೆರಳಲು ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.
ಈ ಮೊದಲು ಮೈಸೂರು ಹಾಗೂ ಹಾಸನ ಜಿಲ್ಲೆಗಳನ್ನು ಪ್ರವೇಶಿಸದಂತೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದ ಹೈಕೋರ್ಟ್ ಷರತ್ತನ್ನು ಸಡಿಲಿಸಿ ಯಾವುದೇ ಕಾರಣಕ್ಕೂ ಈ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿಗಳ ಮನೆಯ ಸುತ್ತ 500 ಮೀಟರ್ ವ್ಯಾಪ್ತಿಯೊಳಗೆ ಪ್ರವೇಶಿಸುವಂತಿಲ್ಲ ಎಂದು ಕಟ್ಟುನಿಟ್ಟಾಗಿ ಹೇಳಿದೆ.
ಕಳೆದ ವರ್ಷ ಡಿಸೆಂಬರ್ 20ರಂದು ಆದೇಶ ನೀಡಿದ್ದ ಕರ್ನಾಟಕ ಹೈಕೋರ್ಟ್ ಕೇವಲ 15 ದಿನಗಳವರೆಗೆ ಮೈಸೂರು, ಹಾಸನಕ್ಕೆ ಪ್ರವೇಶಿಸಬಹುದೆಂದು ಅನುಮತಿ ನೀಡಿತ್ತು. ಈಗ ಷರತ್ತನ್ನು ಸಂಪೂರ್ಣವಾಗಿ ತೆಗೆದುಹಾಕಿರುವುದಿರಂದ ಭವಾನಿಯವರು ಮೈಸೂರು, ಹಾಸನ ಜಿಲ್ಲೆಗಳಿಗೆ ಈ ಹಿಂದೆ ಓಡಾಡಿಕೊಂಡಿದ್ದಂತೆ ಸಂಚರಿಸಬಹುದು.
ಮಾಜಿ ಸಚಿವ ಪ್ರಜ್ವಲ್ ರೇವಣ್ಣ ವಿರುದ್ದ 2024ರ ಮಾ. 2ರಂದು ದೂರು ದಾಖಲಿಸಿದ್ದ ಒಬ್ಬ ವ್ಯಕ್ತಿಯು, “ಪ್ರಜ್ವಲ್ ರೇವಣ್ಣ ಅವರು ಲೈಂಗಿಕ ದೌರ್ಜನ್ಯ ಎಸಗಿರುವ ಅನೇಕ ವಿಡಿಯೋಗಳಲ್ಲೊಂದರಲ್ಲಿ ತಮ್ಮ ತಾಯಿಯ ವಿಡಿಯೋ ಕೂಡ ಇದೆ. ಅದರಲ್ಲಿ ನಮ್ಮ ತಾಯಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದು ತಿಳಿದುಬಂದಿದೆ. ಆ ಹಿನ್ನೆಲೆಯಲ್ಲಿ ತನ್ನ ತಾಯಿ ದೂರು ದಾಖಲಿಸಿದ್ದರು. ಈ ಪ್ರಕರಣ ಬೆಳಕಿಗೆ ಬಂದ ಮೇಲೆ ತಮ್ಮ ತಾಯಿಯನ್ನು ಅಪಹರಿಸಲಾಗಿದೆ’’ ಎಂದು ಆರೋಪಿಸಿದ್ದರು.
ದೂರಿನನ್ವಯ ತನಿಖೆ ನಡೆಸಿದ್ದ ಪೊಲೀಸರು, ಎಚ್ ಡಿ ರೇವಣ್ಣ ಅವರಿಗೆ ಸಂಬಂಧಿಸಿದ್ದೆಂದು ಹೇಳಲಾದ ತೋಟದ ಮನೆಯೊಂದರಿಂದ ಆಕೆಯನ್ನು ರಕ್ಷಿಸಿದ್ದರು. ಅಪಹರಣಕ್ಕೆ ಭವಾನಿ ರೇವಣ್ಣ ಅವರ ಕಾರು ಬಳಕೆಯಾಗಿದ್ದು ತನಿಖೆಯಲ್ಲಿ ತಿಳಿದುಬಂದಿದ್ದರಿಂದ ಭವಾನಿ ರೇವಣ್ಣ ಹಾಗೂ ಅವರ ಕಾರು ಚಾಲಕ ಅಜಿತ್ ವಿರುದ್ಧ ಆರೋಪ ಪಟ್ಟಿ ದಾಖಲಿಸಲಾಗಿತ್ತು.ಈ ದೂರು ದಾಖಲಾಗುತ್ತಿದ್ದಂತೆ ಭವಾನಿ ರೇವಣ್ಣ ಅವರು, ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ 2024ರ ಜೂನ್ 18ರಂದು ಭವಾನಿ ರೇವಣ್ಣ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತು.