ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಆಯುಕ್ತ ಡಿಬಿ ನಟೇಶ್ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಹೊರಡಿಸಿರುವ ಸಮನ್ಸ್ ರದ್ದು ವಿಚಾರವಾಗಿ ಮಹತ್ವದ ಸೂಚನೆ ನೀಡಿರುವ ಕರ್ನಾಟಕ ಹೈಕೋರ್ಟ್, ನಟೇಶ್ ವಿರುದ್ಧ ಪಿಎಂಎಲ್ಎ ಕಾಯ್ದೆಯಡಿ ಇಡಿ ಶೋಧನೆಯನ್ನು ರದ್ದುಪಡಿಸಿದೆ.
ಇಡಿ ಅಧಿಕಾರಿಗಳ ಬಳಿ ನಟೇಶ್ ದಾಖಲಿಸಿದ್ದ ಹೇಳಿಕೆಯನ್ನೂ ಹೈಕೋರ್ಟ್ ರದ್ದುಪಡಿಸಿದೆ. ಅವರ ವಿರುದ್ಧ ಯಾವುದೇ ಅಧಿಸೂಚಿತ ಕೇಸ್ ದಾಖಲಾಗಿರಲಿಲ್ಲ. 14 ಸೈಟ್ ಹಂಚಿಕೆ ಕೇಸ್ನಲ್ಲಿ ನಟೇಶ್ ಆರೋಪಿಯಲ್ಲ. ಅವರ ವಿರುದ್ಧ ನಂಬಲರ್ಹ ಆರೋಪಗಳಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಏಕಪಕ್ಷೀಯ ಶೋಧನೆ ವಿರುದ್ಧ ವ್ಯಕ್ತಿಗೆ ಖಾಸಗಿತನದ ಹಕ್ಕಿದೆ. ಮೇಲ್ನೋಟಕ್ಕೆ ಸಾಕ್ಷ್ಯಗಳಿಲ್ಲದಿದ್ರೂ ಇಡಿ ನಟೇಶ್ ಅವರನ್ನು ಶೋಧನೆಗೆ ಒಳಪಡಿಸಿದ್ದು ಕಾನೂನುಬಾಹಿರ ಎಂದು ನ್ಯಾ. ಹೇಮಂತ ಚಂದನ ಗೌಡರ್ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.
ಹಗರಣದ ತನಿಖೆಯ ಹೊಣೆಯನ್ನು ಸಿಬಿಐಗೆ ವಹಿಸಬೇಕು ಎಂಬ ವಿಚಾರವಾಗಿ ಸುದೀರ್ಘ ವಾದ ಪ್ರತಿವಾದಗಳನ್ನು ಹೈಕೋರ್ಟ್ ಆಲಿಸಿದ್ದು, ತೀರ್ಪನ್ನು ಕಾಯ್ದಿರಿಸಿದೆ. ಹಗರಣದ ಬಗ್ಗೆ ಲೋಕಾಯುಕ್ತ ಈಗಾಗಲೇ ತನಿಖೆಯನ್ನು ಪೂರ್ಣಗೊಳಿಸಿದ್ದು ವರದಿ ಸಿದ್ಧಪಡಿಸಿ ಹೈಕೋರ್ಟ್ಗೆ ಸಲ್ಲಿಸಿದೆ. ಇದನ್ನು ಪರಿಶೀಲಿಸುವುದಾಗಿ ಹೈಕೋರ್ಟ್ ಹೇಳಿದೆ.
ಹಣಕಾಸು ಅವ್ಯವಹಾರ ವಿಷಯವಾಗಿ ಜಾರಿ ನಿರ್ದೇಶನಾಲಯ ತನಿಖೆ ಪ್ರಗತಿಯಲ್ಲಿದೆ. ಇದರ ಭಾಗವಾಗಿ ಜಾರಿ ನಿರ್ದೇಶನಾಲಯ ನಟೇಶ್ ಅವರಿಗೆ ಸಮನ್ಸ್ ನೀಡಿತ್ತು.
ಮೈಸೂರಿನ ದಟ್ಟಗಳ್ಳಿಯಲ್ಲಿ ಪ್ರಾಧಿಕಾರಕ್ಕೆ ಸೇರಿದ ಜಮೀನು ಜಪ್ತಿ ಮಾಡಿರುವ ಸಂಬಂಧ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಬುಧವಾರ ಮಧ್ಯಂತರ ಆದೇಶ ನೀಡಿದೆ.