ಬೆಂಗಳೂರು: ವಿದೇಶದಿಂದ ಅಕ್ರಮ ಚಿನ್ನ ಸಾಗಾಣೆ ಸಂಬಂಧ ಬಂಧಿತ ಡಿಜಿಪಿ ರಾಮಚಂದ್ರರಾವ್ ಮಲಮಗಳು ನಟಿ ರನ್ಯಾ ರಾವ್ ಪತಿ ಜತಿನ್ ಹುಕ್ಕೇರಿ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಸೂಚನೆ ನೀಡಿರುವ ಹೈಕೋರ್ಟ್ ಈ ಸಂಬಂಧದ ಅರ್ಜಿ ವಿಚಾರಣೆಯನ್ನು ಮಾರ್ಚ್ 24ಕ್ಕೆ ಮುಂದೂಡಿದೆ.
ಆರೋಪಿ ರನ್ಯಾ ರಾವ್ ಪತಿ ಜತಿನ್ ಹುಕ್ಕೇರಿ ಬಲವಂತದ ಕ್ರಮ ಕೈಗೊಳ್ಳದಂತೆ ಕೋರಿ ಅರ್ಜಿ ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾ.ಹೇಮಂತ್ ಚಂದನಗೌಡರ್ ಅವರಿದ್ದ ಪೀಠವು ಈ ಆದೇಶ ನೀಡಿದೆ.
ಜತಿನ್ ಪರವಾಗಿ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ವಾದ ಮಂಡಿಸಿದ್ದು, ಯಾವಾಗ ಆಕ್ಷೇಪಣೆ ಅರ್ಜಿ ಸಲ್ಲಿಕೆ ಮಾಡುತ್ತೀರಿ ಎಂದು ಜಡ್ಜ್ ಪ್ರಶ್ನಿಸಿದ್ದು, ಬರುವ ಸೋಮವಾರ ಆಕ್ಷೇಪಣೆ ಸಲ್ಲಿಸುವುದಾಗಿ ಡಿಆರ್‌ಐ ಪರ ವಕೀಲರು ಹೇಳಿದ್ದಾರೆ. ಹೀಗಾಗಿ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮಾರ್ಚ್ 24ಕ್ಕೆ ಮುಂದೂಡಿದ್ದು, ಬಲವಂತದ ಕ್ರಮ ಕೈಗೊಳ್ಳದಂತೆ ಸೂಚನೆ ನೀಡಿದೆ.
ಮದುವೆ ಮನಸ್ತಾಪ:
ಇನ್ನು ನವೆಂಬರ್ನಲ್ಲಿ ರನ್ಯಾ ರಾವ್ರನ್ನು ಜತಿನ್ ಮದುವೆಯಾಗಿದ್ದರು. ಆದರೆ ಡಿಸೆಂಬರ್ನಲ್ಲಿ ಮನಸ್ತಾಪ ಶುರುವಾಗಿತ್ತು. ದಾಂಪತ್ಯವೂ ಸರಿಯಾಗಿರಿಲಿಲ್ಲ ಎಂದು ಪತಿ ಜತಿನ್ ಹುಕ್ಕೇರಿ ಹೈಕೋರ್ಟ್ಗೆ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಮದುವೆಯಾದ ಎರಡೇ ತಿಂಗಳಿಗೆ ರನ್ಯಾ ದುಬೈಗೆ ಓಡಾಟ ಶುರು ಮಾಡಿದ್ದರು. ಪದೇ ಪದೆ ರನ್ಯಾ ದುಬೈ ಪ್ರವಾಸವು ಪತಿಗೆ ಅನುಮಾನ ಬಂದು ಜಗಳವಾಗಿದೆ. ಈ ಜಗಳ ವಿಚ್ಛೇದನ ಹಂತಕ್ಕೂ ತಲುಪಿದೆ. ಹೀಗಾಗಿ ಪತಿಯೇ ಸಚಿವರೊಬ್ಬರಿಗೆ ಮಾಹಿತಿ ರವಾನಿಸಿದ್ದಾರೆ ಎನ್ನಲಾಗಿದೆ.
ಜತಿನ್ ಗೆ ಬಂಧನ ಭೀತಿ:
ಈ ಬಗ್ಗೆ ಪರಿಶೀಲಿಸುವಂತೆ ಡಿಆರ್‌ಐ ಅಧಿಕಾರಿಗಳಿಗೆ ಸಚಿವರು ಮಾಹಿತಿ ಕೊಟ್ಟಿದ್ದಾರೆ. ಅಲ್ಲದೇ ಜ್ಯುವೆಲ್ಲರ್ಸ್ ವ್ಯಾಪಾರಿಗಳು ಮಾಹಿತಿ ನೀಡಿರುವ ಅನುಮಾನವೂ ಇದೆ. ಈ ಮಾಹಿತಿ ಪಡೆದ ಡಿಆರ್‌ಐ ಅಧಿಕಾರಿಗಳು ರನ್ಯಾ ಮೇಲೆ ಕಣ್ಣಿಟ್ಟು ಬಂಧನ ಮಾಡಿದ್ದರು.
ರನ್ಯಾರಾವ್ ಬಂಧನದ ಬಳಿಕ ಪತಿ ಜತೀನ್ ಹುಕ್ಕೇರಿಯನ್ನೂ ಡಿಆರ್‌ಐ ಅಧಿಕಾರಿಗಳು ವಿಚಾರಣೆ ಮಾಡಿದ್ದರು. ಇದರಿಂದ ಬಂಧನ ಭೀತಿಗೆ ಒಳಗಾಗಿದ್ದ ಜತೀನ್ ಹೈಕೋರ್ಟ್ ಮೆಟ್ಟಲೇರಿದ್ದರು.
ಜತಿನ್ ಹುಕ್ಕೇರಿ ಪರ ಹಿರಿಯ ವಕೀಲ ಪ್ರಭುಲಿಂಗ್ ನಾವದಗಿ ವಾದ ಮಂಡಿಸಿದ್ದರು. ಪತ್ನಿಯ ಮೇಲಿನ ಆರೋಪಕ್ಕೂ ಜತಿನ್ಗೂ ಸಂಬಂಧವಿಲ್ಲ. ಮದುವೆಯಾದ ಒಂದೇ ತಿಂಗಳಿಗೆ ಇಬ್ಬರ ನಡುವೆ ಮನಸ್ತಾಪ ಇತ್ತು ಅಂತಾ ವಾದ ಮಾಡಿದ್ದರು. ಇದೀಗ ಕೋರ್ಟ್ ಕಾನೂನು ಪ್ರಕ್ರಿಯೆಯಿಲ್ಲದೇ ಬಂಧಿಸುವಂತಿಲ್ಲವೆಂದು ಆದೇಶ ನೀಡಿದೆ.