Menu

ಕೋಲಾರ ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಕೊಲೆ ಕೇಸ್‌ ಸಿಬಿಐಗೆ ನೀಡಿದ ಹೈಕೋರ್ಟ್

ಕೋಲಾರದ ಕಾಂಗ್ರೆಸ್ ಮುಖಂಡ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸ್ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಿ  ಹೈಕೋರ್ಟ್​ ಮಹತ್ವದ ತೀರ್ಪು ನೀಡಿದೆ.

ಗೃಹ ಸಚಿವ ಜಿ ಪರಮೇಶ್ವರ್ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಆಪ್ತ ಎಂ ಶ್ರೀನಿವಾಸ್ ರನ್ನು 2023 ಅಕ್ಟೋಬರ್ 23ರಂದು ಶ್ರೀನಿವಾಸಪುರ ಹೊರವಲಯದಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದು ಪರಾರಿಯಾಗಿದ್ದರು. ಶ್ರೀನಿವಾಸ್ ಅವರ ಪತ್ನಿ ಡಾ.ಎಸ್. ಚಂದ್ರಕಲಾ  ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಬೇಕೆಂದು ಹೈಕೋರ್ಟ್​ಗೆ ಮನವಿ ಮಾಡಿದ್ದರು.

ಚಂದ್ರಕಲಾ ಅವರ ಮನವಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಈ ಪ್ರಕರಣವನ್ನು ಸಿಬಿಐಗೆ ವಹಿಸಿ ಆದೇಶ ಹೊರಡಿಸಿದ್ದಾರೆ.  ಸ್ಥಳೀಯ ಪೊಲೀಸರು ಹಾಗೂ ಸಿಐಡಿ ಅಧಿಕಾರಿಗಳು ಸಮರ್ಪಕ ತನಿಖೆ ನಡೆಸಿಲ್ಲ.  ಹೀಗಾಗಿ ಸಿಬಿಐ ತನಿಖೆ ಅನಿವಾರ್ಯವೆಂದು ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, 3 ತಿಂಗಳಿನಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸಲು ಸಿಬಿಐಗೆ ಸೂಚನೆ ನೀಡಿದೆ.  ಸಿಬಿಐ ತನಿಖೆಗೆ ಸಹಕರಿಸುವಂತೆ ಪೊಲೀಸರಿಗೂ  ಕೋರ್ಟ್​ ಸೂಚಿಸಿದೆ.

ಕೊಲೆಯ ಹಿಂದೆ ರಾಜಕೀಯ ಷಡ್ಯಂತ್ರವಿದೆ. ಹೀಗಾಗಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕೆಂದು ಎಂದು ಶ್ರೀನಿವಾಸ್​ ಪತ್ನಿ ಡಾ.ಎಸ್.ಚಂದ್ರಕಲಾ  ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ತನಿಖಾಧಿಕಾರಿಗಳು ಸೂಕ್ತ ತನಿಖೆ ನಡೆಸಿಲ್ಲ.  ಹೀಗಾಗಿ ಸಿಬಿಐ ತನಿಖೆಗೆ ವಹಿಸುವಂತೆ ಎಸ್ ಪಿಪಿ ಸಿ.ಹೆಚ್. ಹನುಮಂತರಾಯ ಮನವಿ ಮಾಡಿದ್ದರು.

Related Posts

Leave a Reply

Your email address will not be published. Required fields are marked *