ಶಕ್ತಿ ಯೋಜನೆಯಡಿ ಸರ್ಕಾರ ಎಷ್ಟು ಹಣ ಬಾಕಿ ಉಳಿಸಿಕೊಂಡಿದೆ, ಸಾರಿಗೆ ನಿಗಮಗಳಿಗೆ ನೀಡಬೇಕಾದ ಬಾಕಿಯ ವಿವರ ಮಾರ್ಚ್ 23ರೊಳಗೆ ನೀಡುವಂತೆ ಸೂಚಿಸಿ ಹೈಕೋರ್ಟ್ ರಾಜ್ಯ ಸಾರಿಗೆ ನಿಗಮಕ್ಕೆ ತಾಕೀತು ಮಾಡಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳು ನಷ್ಟವನ್ನು ಅನುಭವಿಸುತ್ತಿವೆ. ಇದರ ಮಧ್ಯೆ ಶಕ್ತಿ ಯೋಜನೆ ಹೊಡೆತ ಕೊಟ್ಟಿದ್ದು ಇನ್ನಷ್ಟು ನಷ್ಟಕ್ಕೆ ಸಾರಿಗೆ ನಿಗಮಗಳು ಸಿಲುಕಿರುವುದು ಬಹಿರಂಗವಾಗಿದೆ ಎಂದು ಕೋರ್ಟ್ ತಿಳಿಸಿದೆ.
ಕೋವಿಡ್ ವೇಳೆ ಮೃತಪಟ್ಟ ಸಾರಿಗೆ ಸಿಬ್ಬಂದಿಗೆ ಪರಿಹಾರ ವಿಚಾರವಾಗಿ ದಾವಣಗೆರೆಯ ತಾಹಿರ್ ಹುಸೇನ್ ಎಂಬವರು ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಕೋವಿಡ್ ಸಂದರ್ಭದಲ್ಲಿ 323 ಉದ್ಯೋಗಿಗಳು ಮೃತಪಟ್ಟಿದ್ದಾರೆ. ಆದರೆ 7 ಕುಟುಂಬಗಳಿಗೆ ಮಾತ್ರ 30 ಲಕ್ಷ ರೂ. ಪರಿಹಾರ ನೀಡಲಾಗಿದೆ. ಉಳಿದವರಿಗೆ ಹಣ ನೀಡಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಸಾರಿಗೆ ನಿಗಮಗಳ ಪರ ವಕೀಲರು ವಾದ ಮಂಡಿಸಿದ್ದು, ಸಾರಿಗೆ ನಿಗಮಗಳು ನಷ್ಟದಲ್ಲಿ ನಡೆಯುತ್ತಿವೆ. ಸಿಬ್ಬಂದಿಗೆ ವೇತನ ನೀಡುವುದೇ ಕಷ್ಟವೆಂಬ ಪರಿಸ್ಥಿತಿಯಿದೆ. ಇದರಿಂದ ಪರಿಹಾರ ನಿರ್ಣಯ ಜಾರಿಗೊಳಿಸದಿರಲು ನಿಗಮಗಳು ನಿರ್ಧರಿಸಿವೆ ಎಂದು ಹೇಳಿದರು. ಈ ಈ ವಾದ ಪ್ರತಿವಾದ ಆಲಿಸಿದ ಕೋರ್ಟ್, ಶಕ್ತಿ ಯೋಜನೆಯಡಿ ಸರ್ಕಾರ ಎಷ್ಟು ಹಣ ಬಾಕಿ ಉಳಿಸಿಕೊಂಡಿದೆ, ಸಾರಿಗೆ ನಿಗಮಗಳಿಗೆ ನೀಡಬೇಕಾದ ಬಾಕಿಯ ವಿವರ ಮಾರ್ಚ್ 23ರೊಳಗೆ ನೀಡುವಂತೆ ಸೂಚಿಸಿದೆ.
ಶಕ್ತಿ ಯೋಜನೆಯಡಿ ಸರಕಾರ ಎಷ್ಟು ಹಣ ಬಾಕಿ ಉಳಿಸಿಕೊಂಡಿದೆ ಮತ್ತು ಕೋವಿಡ್ ಸಂದರ್ಭದಲ್ಲಿ ಸಾವನ್ನಪ್ಪಿದ ಸರಕಾರಿ ಉದ್ಯೋಗಿಗಳಿಗೆ ರೂಪಿಸಿದ ಪರಿಹಾರ ಕಾರ್ಯಕ್ರಮದ ವಿವರಗಳ ದಾಖಲೆ ಸಲ್ಲಿಸಬೇಕು. ಏಳು ಕುಟುಂಬಗಳಿಗೆ ಪರಿಹಾರ ನೀಡಿ ಉಳಿದವರಿಗೆ ನೀಡದೇ ತಾರತಮ್ಯ ಮಾಡಲಾಗದು ಎಂದು ನಿರ್ದೇಶಿಸಿ ವಿಚಾರಣೆಯನ್ನು ಮಾರ್ಚ್ 23ಕ್ಕೆ ಮುಂದೂಡಿದೆ.


