ನಟ ದರ್ಶನ್‌ಗೆ ಬೆಂಗಳೂರು ಬಿಟ್ಟು ಹೋಗದಂತೆ ಇದ್ದ ಷರತ್ತನ್ನು ಕೋರ್ಟ್ ಸಡಿಲಿಸಿದೆ. ವಿದೇಶಕ್ಕೆ ಹೋಗುವುದಾದರೆ ಮಾತ್ರ ಕೋರ್ಟ್ ಅನುಮತಿ ಬೇಕು ಎಂದು ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಮಾಡಿದೆ. ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ದರ್ಶನ್ ಮನವಿಗೆ ಸ್ಪಂದಿಸಿದ ಹೈಕೋರ್ಟ್ ಈ ಸಡಿಲಿಕೆ ನೀಡಿದೆ. ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಈ ಆದೇಶ ಪ್ರಕಟಿಸಿದ್ದಾರೆ.
ಇದರಿಂದ ದರ್ಶನ್‌ಗೆ ಮಾತ್ರವಲ್ಲದೆ ಅವರನ್ನು ನಂಬಿ ಬಂಡವಾಳ ಹೂಡಿದ್ದ ನಿರ್ಮಾಪಕರಿಗೆ ನಿರಾಳತೆ ಸಿಕ್ಕಂತಾಗಿದೆ. ದರ್ಶನ್ ವಿದೇಶಕ್ಕೆ ಹೋಗಲು ಸೆಷನ್ಸ್ ಕೋರ್ಟ್ ಅನುಮತಿ ಅಗತ್ಯವಿದೆ. ಸದ್ಯ ನಟ ದರ್ಶನ್ ಬೆನ್ನುನೋವು ಮಾತ್ರವಲ್ಲದೇ ಕಾಲು ನೋವಿನಿಂದ ಬಳಲುತ್ತಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ತೂಗುದೀಪ ಸೇರಿದಂತೆ ಎಲ್ಲ ಆರೋಪಿಗಳಿಗೆ ಜಾಮೀನು ಸಿಕ್ಕ ಬಳಿಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಬೆಂಗಳೂರು ಪೊಲೀಸರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಪ್ರಕರಣ ಸಂಬಂಧ 1,492 ಪುಟಗಳ ಮಹತ್ವದ ದಾಖಲೆಗಳನ್ನು ಸಲ್ಲಿಸಿದ್ದರು. ಪರಿಶೀಲಿಸಿದ ಸುಪ್ರೀಂ ಕೋರ್ಟ್ ಪ್ರಕರಣದ ಆರೋಪಿಗಳಿಗೆ ನೋಟಿಸ್ ಜಾರಿಗೊಳಿಸಿತ್ತು.