ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ಸೆ.2ಕ್ಕೆ ಮುಂದೂಡಿದೆ. ಪ್ರಕರಣ ರದ್ದು ಕೋರಿ ಯಡಿಯೂರಪ್ಪ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಈ ಕ್ರಮ ಪ್ರಕಟಿಸಿದೆ.
ದೂರು ದಾಖಲಿಸಿದ್ದ ಮೃತ ಮಹಿಳೆಯು ಉನ್ನತ ಪೊಲೀಸ್ ಅಧಿಕಾರಿ ಡಿಜಿಪಿ, ಆಯುಕ್ತರು, ಪತಿ, ಮಗ, ಸಂಬಂಧಿಗಳ ಮೇಲೂ ದೂರು ನೀಡಿದ್ದಾರೆ ಎಂದು ಯಡಿಯೂರಪ್ಪ ಪರ ವಕೀಲರು ಹೈಕೋರ್ಟ್ಗೆ ಮಾಹಿತಿ ನೀಡಿದರು. ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿ, ಸಂತ್ರಸ್ತೆಯ ತಾಯಿಗೆ ದೂರುಗಳನ್ನು ನೀಡುವ ಹವ್ಯಾಸ ಇತ್ತು. ಆಕೆ ಡಿಜಿಪಿ, ಆಯುಕ್ತರು, ಪತಿ, ಮಗ, ಸಂಬಂಧಿಗಳ ಮೇಲೂ ಇದೇ ರೀತಿ ದೂರು ದಾಖಲಿಸಿದ್ದರು. ಇಂತಹ ಘಟನೆ ನಡೆದಿಲ್ಲವೆಂದು ಹೇಳಿದ ಸಾಕ್ಷಿಗಳೂ ಇದ್ದಾರೆ ಎಂದು ವಾದಿಸಿದರು.
ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ಅವರ ಮನೆಯಲ್ಲಿ 2024ರ ಫೆಬ್ರವರಿ ತಿಂಗಳಲ್ಲಿ ಯಡಿಯೂರಪ್ಪ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆಯೊಬ್ಬರು ನೀಡಿದ್ದ ದೂರು ಆಧರಿಸಿ ತನಿಖೆ ನಡೆಸಿದ್ದ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ದೋಷಾರೋಪ ಪಟ್ಟಿ ರದ್ದುಪಡಿಸಬೇಕು ಎಂದು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿದೆ.