ಬೆಂಗಳೂರು: ನಾನು ಮುಖ್ಯಮಂತ್ರಿ ಆಗುವ ಕುರಿತು ಹೈಕಮಾಂಡ್ ಜೊತೆ ಆಗಿರುವ ಮಾತುಕತೆಯನ್ನು ನಾನು ಬಹಿರಂಗಪಡಿಸುವುದಿಲ್ಲ. ಆದರೆ 2028ರಲ್ಲಿ ನನ್ನ ನಾಯಕತ್ವದಲ್ಲೇ ಪಕ್ಷ ಚುನಾವಣೆ ಎದುರಿಸಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಖಾಸಗಿ ಟೀವಿ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಮುಂದಿನ ಸಂದರ್ಶನದ ವೇಳೆ ನೀಉ ಮುಖ್ಯಮಂತ್ರಿ ಆಗಿ ನೋಡಬಹುದಾ ಎಂಬ ಪ್ರಶ್ನೆಗೆ ನಂಬಿಕೆಯೇ ಜೀವನ. ನಂಬಿಕೆ ಇದ್ದರೆ ಮಾತ್ರ ಆ ಪ್ರಯತ್ನದಲ್ಲಿ ಯಶಸ್ಸು ಸಾಧ್ಯ. ಈ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ ಎಂದರು.
ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಹಲವು ಕಾರಣಗಳಿಗೆ ನನ್ನನ್ನು ಸಚಿವ ಸಂಪುಟದಲ್ಲಿ ತೆಗೆದುಕೊಂಡಿರಲಿಲ್ಲ. ಆಗ ಸೋನಿಯಾ ಗಾಂಧಿ ಮಧ್ಯಪ್ರವೇಶಿಸಿ ನನಗೆ ಸಚಿವ ಸ್ಥಾನ ಕೊಡಿಸಿದ್ದರು ಎಂದು ಅವರು ಹೇಳಿದರು.
ಗಾಂಧಿ ಕುಟುಂಬ ಇರುವುದರಿಂದ ಕಾಂಗ್ರೆಸ್ ಒಗ್ಗಟ್ಟಾಗಿದೆ. ಕಾಂಗ್ರೆಸ್ ಇರುವುದರಿಂದ ದೇಶ ಒಗ್ಗಟ್ಟಾಗಿದೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಸಾಕಷ್ಟು ಅವಕಾಶಗಳಿದ್ದರೂ ಪ್ರಧಾನಿ ಸ್ಥಾನ ಅಥವಾ ಸಚಿವ ಸ್ಥಾನ ಪಡೆಯದೇ ತ್ಯಾಗ ಮಾಡಿದರು. ಮನಸ್ಸು ಮಾಡಿದ್ದರೆ ಸೋನಿಯಾ ಗಾಂಧಿ 10 ವರ್ಷಗಳ ಕಾಲ ಪ್ರಧಾನಿ ಆಗಿರಬಹುದಿತ್ತು ಎಂದು ಅವರು ವಿವರಿಸಿದರು.
ಕಾಂಗ್ರೆಸ್ ಮುಖಂಡರ ವಿರೋಧದ ನಡುವೆಯೂ ಕುಂಭ ಮೇಳಕ್ಕೆ ಹೋಗಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ನಾನು ಹಿಂದು, ಆದರೆ ನನಗೆ ಜಾತಿ, ಜನಾಂಗದ ಮೇಲೆ ನಂಬಿಕೆ ಇಲ್ಲ. ಎಲ್ಲಾ ಸಮಾಜದವರನ್ನು ಒಗ್ಗೂಡಿಸಿ ಕೊಂಡೊಯ್ಯಬೇಕು ಎಂಬುದು ನಮ್ಮ ನಿಲುವು. ಮತ್ತು ಕಾಂಗ್ರೆಸ್ ಪಕ್ಷದ ನಿಲುವಾಗಿದೆ. ಮಾನವ ಧರ್ಮದ ಮೇಲೆ ನನಗೆ ನಂಬಿಕೆ ಇದೆ ಎಂದು ಸ್ಪಷ್ಟಪಡಿಸಿದರು.
ಕುಂಭ ಮೇಳದಲ್ಲಿ 60 ಕೋಟಿಗೂ ಹೆಚ್ಚು ಜನರು ಹೋಗಿದ್ದಾರೆ. ನಾನು ಹೋಗುವುದರಿಂದ ತಪ್ಪೇನು. ಇದು ನನ್ನ ವೈಯಕ್ತಿಕ ನಿಲುವು ಮತ್ತು ನಿರ್ಧಾರ. ಸೋನಿಯಾ ಗಾಂಧಿ ಬೇರೆ ದೇಶದವರಾಗಿದ್ದರೂ ಯುಗಾದಿ ಹಬ್ಬವನ್ನು ಆಚರಿಸುತ್ತಾರೆ. ಹಿಂದೂ ದೇವರ ದರ್ಶನ ಮಾಡುತ್ತಾರೆ ಎಂದು ಅವರು ಹೇಳಿದರು.
ಕ್ಷೇತ್ರ ಪುನರ್ ವಿಂಗಡಣೆ ಕುರಿತು ವಿರೋಧ ವ್ಯಕ್ತಪಡಿಸುವುದು ಸರಿಯೇ? ಉತ್ತರ ಭಾರತೀಯರು 30 ಲಕ್ಷಕ್ಕೆ ಒಬ್ಬ ಸಂಸದರು ಇದ್ದರೆ ದಕ್ಷಿಣದಲ್ಲಿ 20 ಲಕ್ಷಕ್ಕೆ ಒಬ್ಬ ಸಂಸದ ಇದ್ದಾರೆ. ಈ ತಾರತಮ್ಯ ಹೋಗಲಾಡಿಸುವುದು ತಪ್ಪೇ ಎಂಬ ಪ್ರಶ್ನೆಗೆ, ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡಣೆ ಮಾಡಿದರೆ ಈಶಾನ್ಯ ರಾಜ್ಯಗಳಲ್ಲಿ ಜನಸಂಖ್ಯೆ ತುಂಬಾ ಕಡಿಮೆ ಇದೆ. ಅವರಿಗೆ ನಷ್ಟ ಆಗುವುದಿಲ್ಲವೇ? ಎಂದು ಪ್ರಶ್ನಿಸಿದರು.
ದಕ್ಷಿಣ ಭಾರತದ ಮೂಲಕ ಭಾರತವನ್ನು ನೋಡಲಾಗುತ್ತಿದೆ. ಜನಸಂಖ್ಯೆ ನಿಯಂತ್ರಣ ಮಾಡಬೇಕಿರುವ ಜವಾಬ್ದಾರಿ ಆ ರಾಜ್ಯಗಳ ಮೇಲಿದೆ. ನಾವು ಉತ್ತಮ ಗುಣಮಟ್ಟದ ಶಿಕ್ಷಣ, ಮೂಲಭೂತ ಸೌಕರ್ಯ ಕೊಡುತ್ತಿದ್ದೇವೆ. ಬೆಂಗಳೂರು ಅಥವಾ ದಕ್ಷಿಣ ಭಾರತದ ನಗರಗಳ ಮೂಲಕ ಭಾರತವನ್ನು ಗುರುತಿಸಲಾಗುತ್ತಿದೆ. ಉತ್ತರ ಭಾರತದ ಯಾವ ರಾಜ್ಯ ಉತ್ತಮವಾಗಿದೆ? ಎಷ್ಟು ತೆರಿಗೆ ಕಟ್ಟುತ್ತಿವೆ. ನಾವು 1 ರೂ. ತೆರಿಗೆ ಪಾವತಿಸಿದರೆ 13 ಪೈಸೆ ವಾಪಸ್ ಪಡೆಯುತ್ತಿದ್ದೇವೆ. ಆದರೆ ಉತ್ತರ ಭಾರತದ ರಾಜ್ಯಗಳು ಕಡಿಮೆ ತೆರಿಗೆ ಕೊಟ್ಟು ಹೆಚ್ಚು ಪಾಲು ಪಡೆಯುತ್ತಿವೆ. ಇದರ ವಿರುದ್ಧ ನಾವು ಯಾವುದೇ ಹಂತದಲ್ಲೂ ಹೋರಾಟ ನಡೆಸುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದರು.