Thursday, February 20, 2025
Menu

ಹಕ್ಕಿ ಜ್ವರದ ಆತಂಕ: ರಾಜ್ಯದ ಗಡಿ ಭಾಗಗಳಲ್ಲಿ ಹೈ ಅಲರ್ಟ್‌

ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರದಲ್ಲಿ ಹಕ್ಕಿಜ್ವರ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಮಹಾರಾಷ್ಟ್ರದ 7 ಜಿಲ್ಲೆಗಳಲ್ಲಿ ಹುಲಿ, ಚಿರತೆ, ಕಾಗೆಗಳಲ್ಲೂ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಹಕ್ಕಿಜ್ವರದಿಂದ ಕಾಗೆಗಳು ಮೃತಪಟ್ಟಿದ್ದರೆ, ಆಂಧ್ರ, ತೆಲಂಗಾಣದಲ್ಲಿ ಎಚ್‌೫ಎನ್‌೧ ವೈರಸ್ ಸೋಂಕಿನಿಂದ ಕೋಳಿಗಳು ಸಾಯುತ್ತಿವೆ. ಹೀಗಾಗಿ ಕರ್ನಾಟಕದ ಗಡಿ ಭಾಗಗಳಲ್ಲಿ ಆತಂಕವುಂಟಾಗಿದೆ.

ತೆಲಂಗಾಣ, ಆಂಧ್ರ ಪ್ರದೇಶ ಫಾರ್ಮ್‌ಗಳಲ್ಲಿ ನೂರಾರು ಕೋಳಿಗಳು ಸಾಯುತ್ತಿವೆ. ಕೋಳಿ ಖರೀದಿಗೆ ಜನ ಹಿಂದೇಟು ಹಾಕ್ತಿದ್ದು, ಮಾಲೀಕರು ಅಂಗಡಿಗಳನ್ನು ಬಂದ್ ಮಾಡುತ್ತಿದ್ದಾರೆ. ಸತ್ತ ಕೋಳಿಗಳನ್ನು ಮೀನುಗಳಿಗೆ ಆಹಾರವಾಗಿ ಹಾಕಲಾಗುತ್ತಿದೆ. ಈ ಮೀನುಗಳನ್ನು ತಿನ್ನುವ ಜನರ ಆರೋಗ್ಯ ಸ್ಥಿತಿ ಹದಗೆಡುತ್ತಿದೆ. ನಗರಸಭೆ, ಪುರಸಭೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು  ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಬೀದರ್‌, ಬೆಳಗಾವಿ, ಬಳ್ಳಾರಿ ಸೇರಿದಂತೆ ಗಡಿ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ. ಬೇರೆ ರಾಜ್ಯಗಳಿಂದ ಬರುವ ಕೋಳಿ ಹಾಗೂ ಮೊಟ್ಟೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ಮಹಾರಾಷ್ಟ್ರದ ಲಾತೂರ್​ನಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೀದರ್ ಜಿಲ್ಲೆಯ ಗಡಿಭಾಗದ ತಾಲೂಕುಗಳಲ್ಲಿ ಪಶುಸಂಗೋಪನಾ ಇಲಾಖೆ ಹೈಅಲರ್ಟ್ ಘೋಷಿಸಿದೆ. ಮಹಾರಾಷ್ಟ್ರದಿಂದ ತರುವ ಕೋಳಿ ಮಾಂಸ, ಮೊಟ್ಟೆ ಸಾಗಣೆ, ಮಾರಾಟಕ್ಕೆ ನಿಷೇಧ ವಿಧಿಸಿದೆ. ಭಾಲ್ಕಿ, ಕಮಲನಗರ, ಬಸವಕಲ್ಯಾಣ, ಔರಾದ್ ತಾಲೂಕಿನ ಗಡಿಯಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಿ ತಪಾಸಣೆ ಮಾಡಲಾಗುತ್ತಿದೆ.

ಜ್ವರ, ಕೆಮ್ಮು, ಗಂಟಲು ನೋವು, ಸ್ನಾಯು ನೋವು, ವಾಂತಿಬೇಧಿ, ನೆಗಡಿ, ಉಸಿರಾಟದ ತೊಂದರೆ ಇವುಗಳು ಹಕ್ಕಿಜ್ವರದ ಲಕ್ಷಣಗಳಾಗಿವೆ. ಈ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಸದ್ಯ ರಾಜ್ಯದಲ್ಲಿ ಹಕ್ಕಿಜ್ವರ ಪತ್ತೆಯಾಗಿಲ್ಲ.

Related Posts

Leave a Reply

Your email address will not be published. Required fields are marked *