ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಶೋಷಣೆ ಮತ್ತು ಸ್ತ್ರೀದ್ವೇಷದ ಕುರಿತು ಹೇಮಾ ಸಮಿತಿ ನೀಡಿದ ವರದಿಗೆ ಸಂಬಂಧಿಸಿದ ಕೆಲವೊಂದು ಪ್ರಕರಣಗಳನ್ನು ಕೈಬಿಡಲು ಕೇರಳ ಪೊಲೀಸರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಸಂತ್ರಸ್ತರು ತನಿಖೆಗೆ ಅಸಹಕಾರ ತೋರುತ್ತಿರುವುದರಿಂದ ವಿಶೇಷ ತನಿಖಾ ತಂಡಕ್ಕೆ ಸಾಕಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ 35 ಕ್ರಿಮಿನಲ್ ಪ್ರಕರಣಗಳಲ್ಲಿ ‘ಫರ್ದರ್ ಆಕ್ಷನ್ ಡ್ರಾಪ್ಡ್’ (ಎಫ್‌ಎಡಿ) ವರದಿಗಳನ್ನು ಸಲ್ಲಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಧ್ಯಮ (ದಿ ಹಿಂದೂ) ವರದಿ ಮಾಡಿದೆ.
ಎಸ್‌ಐಟಿ ಮತ್ತು ನ್ಯಾಯಾಲಯ ಸಮನ್ಸ್ ಜಾರಿ ಮಾಡಿದರೂ ಸಂತ್ರಸ್ತರು ಪ್ರಕರಣಗಳಿಗೆ ಸಂಬಂಧಿಸಿದಂತೆ ಹೇಳಿಕೆಗಳನ್ನು ನೀಡಲು ನಿರಾಕರಿಸಿದ್ದಾರೆ. ತನಿಖೆಯಲ್ಲಿ ಯಾವುದೇ ಪ್ರಗತಿ ಕಾಣದ ಕಾರಣ 21 ಪ್ರಕರಣಗಳಲ್ಲಿ ಎಫ್‌ಎಡಿ ವರದಿಗಳನ್ನು ಸಲ್ಲಿಸಲಾಗಿದೆ. ಉಳಿದ 14 ಪ್ರಕರಣಗಳನ್ನು ತಾತ್ಕಾಲಿಕವಾಗಿ ಕೈಬಿಡುವ ಸಾಧ್ಯತೆಯಿದೆ ಎಂದು ತನಿಖೆಯ ನೋಡಲ್ ಅಧಿಕಾರಿ ಮತ್ತು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕಿ ಜಿ. ಪೂಂಗುಝಿಲಿ ತಿಳಿಸಿದ್ದಾಗಿ ಮೂಲಗಳು ಹೇಳಿವೆ.
ಸದ್ಯಕ್ಕೆ ಪ್ರಕರಣಗಳ ತನಿಖೆಯನ್ನು ಅಂತ್ಯಗೊಳಿಸಲಾಗುತ್ತಿದೆ. ಶಾಶ್ವತವಾಗಿ ಕೈಬಿಡುವುದಿಲ್ಲ. ಸಂತ್ರಸ್ತರು ಯಾವಾಗಲಾದರೂ ಹೇಳಿಕೆ ದಾಖಲಿಸಲು ಅವಕಾಶವಿದೆ. ಆಗ ತನಿಖೆ ಮುಂದುವರಿಯಲಿದೆ. ಹೇಮಾ ಸಮಿತಿ ವರದಿ ಮತ್ತು ಸಂತ್ರಸ್ತರ ಆರೋಪಗಳನ್ನು ಆಧರಿಸಿ ದಾಖಲಾಗಿರುವ 70 ಇತರ ಪ್ರಕರಣಗಳ ಪೊಲೀಸ್ ತನಿಖೆ ಮುಂದುವರಿದಿದೆ. 25 ಪ್ರಕರಣಗಳಲ್ಲಿ ಈಗಾಗಲೇ ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಲಾಗಿದೆ.
ಮಲಯಾಳಂ ಚಿತ್ರರಂಗದಲ್ಲಿ ಮಹಿಳಾ ಕಲಾವಿದರು ಅನುಭವಿಸುತ್ತಿರುವ ಲೈಂಗಿಕ ಮತ್ತು ಇತರ ಶೋಷಣೆಗಳ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ಜುಲೈ 2017 ರಲ್ಲಿ ಹೇಮಾ ಸಮಿತಿಯನ್ನು ಸರ್ಕಾರ ರಚಿಸಿತ್ತು. ಈ ಸಮಿತಿ 31 ಡಿಸೆಂಬರ್ 2019ರಂದು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.