ರಾಷ್ಟ್ರಪತಿ ದ್ರೌಪದಿ ಮುರ್ಮು ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡ್ ಆಗುತ್ತಿದ್ದಂತೆ ಲ್ಯಾಂಡಿಂಗ್ ಪ್ಯಾಡ್ ನಲ್ಲಿ ಸಿಲುಕಿಕೊಂಡ ಘಟನೆ ಕೇರಳದ ಪ್ರಮದಂ ಕ್ರೀಡಾಂಗಣದಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದೆ.
ರಾಷ್ಟ್ರಪತಿ ಅವರಿದ್ದ ಹೆಲಿಕಾಪ್ಟರ್‌ನ ಒಂದು ಭಾಗ ಡಾಂಬರಿನಲ್ಲಿ ಸಿಲುಕಿಕೊಂಡಿತ್ತು. ರಾಷ್ಟ್ರಪತಿನ ದ್ರೌಪದಿ ಮುರ್ಮು ಅವರು ಆನಂತರ ಸುರಕ್ಷಿತವಾಗಿ, ಶಬರಿಮಲೆಯ ತಪ್ಪಲಿನಲ್ಲಿರುವ ಪಂಪಾಗೆ ತೆರಳಿದರು. ಆ ಕೂಡಲೇ ರಾಜೀವ್ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಹಲವಾರು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಒಳಗೊಂಡಂತೆ ಭಾರತೀಯ ವಾಯುಪಡೆ ಸಿಬ್ಬಂದಿ ಎಂಐ -17 ಹೆಲಿಕಾಪ್ಟರ್‌ನ ಚಕ್ರಗಳನ್ನು ಡಾಂಬರಿನಿಂದ ತಳ್ಳುತ್ತಿರುವುದು ಕಂಡುಬಂದಿತ್ತು.
ಮೊದಲು ಪಂಬಾ ಬಳಿಯ ನೀಲಕ್ಕಲ್‌ನಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಬಗ್ಗೆ ಯೋಜನೆ ರೂಪಿಸಲಾಗಿತ್ತು. ಆದರೆ. ಅಲ್ಲಿನ ಕೆಟ್ಟ ಹವಾಮಾನದ ಕಾರಣದಿಂದಾಗಿ ಸ್ಥಳವನ್ನು ಪ್ರಮದಂಗೆ ಬದಲಾಯಿಸಲಾಯಿತು. ಕೊನೆಯ ಕ್ಷಣದಲ್ಲಿ ಇಳಿಯುವ ಸ್ಥಳವನ್ನು ನಿಗದಿಪಡಿಸಿದ್ದರಿಂದ ಸಮಸ್ಯೆಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ʻಪ್ರಮದಂನಲ್ಲಿ ಕಾಂಕ್ರೀಟ್ ಸಂಪೂರ್ಣವಾಗಿ ಗಟ್ಟಿಯಾಗಿರಲಿಲ್ಲ, ಆದ್ದರಿಂದ ಹೆಲಿಕಾಪ್ಟರ್ ಇಳಿದಾಗ ಅದರ ಕಾಂಕ್ರಿಟ್‌ಗೆ ತೂಕವನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಚಕ್ರಗಳು ನೆಲಕ್ಕೆ ಸಿಲುಕಿತು. ಸ್ಥಳದಲ್ಲಿ ರಸ್ತೆಗುಂಡಿ ಉಂಟಾಗಲು ಕಾರಣವಾಯಿತುʼ ಎಂದು ಅಧಿಕಾರಿಯೊಬ್ಬರು ವಿವರಿಸಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೇರಳಕ್ಕೆ ನಾಲ್ಕು ದಿನಗಳ ಅಧಿಕೃತ ಭೇಟಿಗಾಗಿ ಮಂಗಳವಾರ ಸಂಜೆ ತಿರುವನಂತಪುರಕ್ಕೆ ಆಗಮಿಸಿದ್ದರು. ಬುಧವಾರ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಬೇಕಾಗಿತ್ತು. ಹೀಗಾಗಿ ಪ್ರಮದಂಗೆ ಬಂದು ಇಳಿದಿದ್ದರು.
ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಪ್ರಾರ್ಥನೆ ಸಲ್ಲಿಸಲು ಭೇಟಿ ನೀಡಿದ ಮೊದಲ ಮಹಿಳಾ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ದ್ರೌಪದಿ ಮುರ್ಮು ಪಾತ್ರರಾಗಲಿದ್ದಾರೆ. 1970ರ ದಶಕದಲ್ಲಿ ಶಬರಿಮಲೆಗೆ ಭೇಟಿ ನೀಡಿದ್ದ ಮಾಜಿ ರಾಷ್ಟ್ರಪತಿ ವಿವಿ. ಗಿರಿ ಅವರ ನಂತರ, ಈ ದೇಗುಲಕ್ಕೆ ಭೇಟಿ ನೀಡುತ್ತಿರುವ ಎರಡನೇ ರಾಷ್ಟ್ರಪತಿ ಅವರಾಗಿದ್ದಾರೆ.