ಬೆಂಗಳೂರು ದಕ್ಷಿಣ ಜಿಲ್ಲೆ ಆನೇಕಲ್ ತಾಲೂಕಿನ ಹೆಬ್ಬಗೋಡಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಕ್ರೀಡಾ ಪರಿಕರಗಳನ್ನು ನೀಡಲಾಗಿದೆ. ಶಾಲೆಯಲ್ಲಿ ಕ್ರೀಡಾ ಪರಿಕರಗಳು ಇಲ್ಲದೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವ ಶಾಲೆಯ ಹಳೆಯ ವಿದ್ಯಾರ್ಥಿಯೊಬ್ಬರು ಸಂತೋಷ್ ಲಾಡ್ ಫೌಂಡೇಶನ್‌ಗೆ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಸ್ಪಂದಿಸಿರುವ ಫೌಂಡೇಶನ್ ಶಾಲೆಗೆ ಮಕ್ಕಳಿಗೆ ಅಗತ್ಯವಾಗಿ ಬೇಕಾದ ಎಲ್ಲಾ ಸಾಮಗ್ರಿ ಗಳನ್ನು ನೀಡಿ ಅನುಕೂಲ ಮಾಡಿಕೊಟ್ಟಿದೆ.
ನೂರು ವರ್ಷ ಹಳೆಯ ಈ ಶಾಲೆಯಲ್ಲಿ ಪ್ರತಿಭಾವಂತರ ಮಕ್ಕಳಿದ್ದು, ಕ್ರೀಡೆಯಲ್ಲೂ ಸಾಕಷ್ಟು ಚಟುವಟಿಕೆಗೆ ಹೆಸರು ಮಾಡಿತ್ತು. ಆದರೆ ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಗ್ರಿಗಳ ಕೊರತೆಯಿಂದ ತೊಂದರೆಯಾಗಿತ್ತು. ಇದೀಗ ಸಂತೋಷ್ ಲಾಡ್ ಫೌಂಡೇಶನ್ ಇವರಿಗೆ ಅನುಕೂಲ ಮಾಡಿಕೊಟ್ಟಿದೆ. ಕರ್ನಾಟಕ ರಾಜ್ಯೋತ್ಸವದ ದಿನವೇ ಕ್ರೀಡಾ ಸಾಮಗ್ರಿಗಳನ್ನು ವಿತರಿಸಿ ಶಾಲೆಯಲ್ಲಿನ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದೆ.
ನೂರು ವರ್ಷ ಹಳೆಯ ಈ ಶಾಲೆಯಲ್ಲಿ ಸದ್ಯ 1200 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಇಷ್ಟು ಮಕ್ಕಳಿದ್ದರೂ ಸರಿಯಾದ ಕ್ರೀಡಾ ಸಾಮಗ್ರಿಗಳು ಇರಲಿಲ್ಲ. ಬೆಂಗಳೂರಿನಲ್ಲೇ ಅತ್ಯುತ್ತಮ ಶಾಲೆ ಎಂಬ ಹೆಸರನ್ನೂ ಈ ಶಾಲೆ ಪಡೆದಿತ್ತು. ಇತ್ತೀಚೆಗೆ ದೈಹಿಕ ಶಿಕ್ಷಣ ಶಿಕ್ಷಕರಿಲ್ಲದೆ ಸಮಸ್ಯೆಯಾಗಿತ್ತು. ಈಗ ಶಿಕ್ಷಕರನ್ನು ನಿಯೋಜಿಸಲಾಗಿತ್ತು. ಆದರೆ ಕ್ರೀಡೆಗೆ ಪರಿಕರಗಳಿರಲಿಲ್ಲ. ಇದೀಗ ಸಂತೋಷ್ ಲಾಡ್ ಫೌಂಡೇಶನ್ ಇದೆಲ್ಲದಕ್ಕೆ ಪರಿಹಾರ ಒದಗಿಸಿದೆ.
ಈ ಶಾಲೆಯಲ್ಲಿ ಕ್ರೀಡಾ ಸಾಮಗ್ರಿಗಳು ಇಲ್ಲ ಎಂಬುದನ್ನು ತಿಳಿದ ಹಳೆಯ ವಿದ್ಯಾರ್ಥಿ ಕುಮಾರ್ ಎಂಬುವರು ಮಕ್ಕಳಿಗೆ ಏನಾದರೂ ಸಹಾಯ ಮಾಡಬೇಕು ಎಂದು ಯೋಚಿಸಿದರು. ಆಗ ಅವರಿಗೆ ನೆನಪಿಗೆ ಬಂದಿದ್ದೇ ಸಂತೋಷ್ ಲಾಡ್ ಫೌಂಡೇಶನ್. ಫೌಂಡೇಶನ್ ಹಲವಾರು ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುವುದನ್ನು ಸಾಮಾಜಿಕ ಮಾಧ್ಯಮದ ಮೂಲಕ ತಿಳಿದ ಅವರು, ಫೌಂಡೇಶನ್ ಸಂಪರ್ಕ ಮಾಡಿದರು. ಸದ್ಯ ಬೆಂಗಳೂರಿನ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಕುಮಾರ್ ಅವರು ಈ ಶಾಲೆಯಲ್ಲಿ ಹೈಸ್ಕೂಲ್ ವರೆಗೆ ಓದಿದ್ದಾರೆ. ತಾನು ಓದಿದ ಶಾಲಾ ಮಕ್ಕಳಿಗೆ ಸಹಾಯ ಮಾಡಬೇಕು ಎಂಬ ಅವರ ಆಸೆಗೆ ಫೌಂಡೇಶನ್ ಬೆಂಬಲ ನೀಡಿತು.
ಸಂತೋಷ್ ಲಾಡ್ ಫೌಂಡೇಶನ್ ಸಂಪರ್ಕ ಮಾಡಿದಾಗ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು. ಮಕ್ಕಳಿಗೆ ಅತ್ಯುತ್ತಮವಾದ ಕ್ರೀಡಾ ಸಾಮಗ್ರಿಗಳು ಹಾಗೂ ಇತರೆ ಪರಿಕರಗಳನ್ನು ನೀಡಿದರು. ಇದರಿಂದ ಮಕ್ಕಳಿಗೆ ಅನುಕೂಲವಾಗಿದೆ. ಸಂತೋಷ್ ಲಾಡ್ ಫೌಂಡೇಶನ್ ಸಹಕಾರವನ್ನು ಎಂದೂ ಮರೆಯಲಾಗದು ಎಂದು ಕುಮಾರ್ ಹೇಳಿದ್ದಾರೆ.
ನಮ್ಮ ಶಾಲೆಯ ಮಕ್ಕಳು ಸಾಕಷ್ಟು ಪ್ರತಿಭಾವಂತರು. ಇವರಿಗೆ ಕ್ರೀಡಾ ಸಾಮಗ್ರಿಗಳ ಅವಶ್ಯಕತೆ ಇತ್ತು. ಅದನ್ನು ಹಳೇ ವಿದ್ಯಾರ್ಥಿ ಸಂಘದೊಂದಿಗೆ ಚರ್ಚೆ ಮಾಡಿದೆವು. ಅವರು ಸಂತೋಷ್ ಲಾಡ್ ಫೌಂಡೇಶನ್ ಬಗ್ಗೆ ತಿಳಿಸಿದರು. ಈ ಸಾಕಷ್ಟು ಸಾಮಗ್ರಿಗಳು ಬಂದಿವೆ. ಸಚಿವ ಸಂತೋಷ್ ಲಾಡ್ ಅವರಿಗೆ ಧನ್ಯವಾದಗಳು. ಈ ನೆರವನ್ನು ನಾವು ಸದಾ ಸ್ಮರಿಸುತ್ತೇವೆ ಎಂದು ಶಿಕ್ಷಕಿ ಪವಿತ್ರಾ ತಿಳಿಸಿದ್ದಾರೆ.
ಸಂತೋಷ್ ಲಾಡ್ ಫೌಂಡೇಶನ್ ಹಲವಾರು ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ. ಜಿಲ್ಲೆಯ ವ್ಯಾಪ್ತಿಯ ಮಿತಿಯಿಲ್ಲದೆ ರಾಜ್ಯದ ವಿವಿಧ ಭಾಗದ ವಿದ್ಯಾರ್ಥಿಗಳಿಗೆ, ಜನರಿಗೆ ನೆರವು ಒದಗಿಸುತ್ತಿದೆ. ಇದೀಗ ಆನೇಕಲ್ ತಾಲೂಕಿನ ಶಾಲೆಗೆ ಕ್ರೀಡಾ ಸಾಮಗ್ರಿ ಒದಗಿಸುವುದರೊಂದಿಗೆ ಫೌಂಡೇಶನ್ ನೆರವಿನ ವ್ಯಾಪ್ತಿ ಇನ್ನಷ್ಟು ಹೆಚ್ಚಿದೆ.


