ಅಮೆರಿಕದ ಹಲವೆಡೆ ದಟ್ಟ ಮಂಜು ಮತ್ತು ತೀವ್ರ ಹಿಮಪಾತವಾಗುತ್ತಿದ್ದು, 9000ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದೆ. ದೇಶದ ಬಹುತೇಕ ಭಾಗಗಳಲ್ಲಿ ಭಾರೀ ಅಸ್ತವ್ಯಸ್ತಗೊಂಡಿದ್ದು, 15 ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ರಾಜ್ಯ ಹಾಗೂ ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿಕೊಂಡು ಕಾರ್ಯನಿರ್ವಹಿಸಲಾಗುತ್ತಿದೆ. ಯಾವುದೇ ತುರ್ತು ಪರಿಸ್ಥಿತಿಗೆ ತ್ವರಿತವಾಗಿ ಸ್ಪಂದಿಸಲು ಫೆಡರಲ್ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್ ಏಜೆನ್ಸಿ (ಫೀಮಾ) ಸಂಪೂರ್ಣ ಸನ್ನದ್ಧಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಉತ್ತರ ಟೆಕ್ಸಾಸ್ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಪೂರ್ತಿ ಹಿಮ ಸುರಿದಿದ್ದು ಜೊತೆಗೆ ಮಳೆಯಾಗಿದೆ. ತೀವ್ರ ಶೀತ ಅಲೆ ಅಪಾಯಕಾರಿ ಮಟ್ಟದಲ್ಲಿ ವ್ಯಾಪಿಸುತ್ತಿದ್ದು, ಸೋಮವಾರದವರೆಗೆ ಮುಂದುವರಿಯಲಿದೆ, ಮುಂದಿನ ಕೆಲವು ರಾತ್ರಿಗಳಲ್ಲಿ ತಾಪಮಾನ ಮೈನಸ್ 24 ಡಿಗ್ರಿ ಸೆಲ್ಸಿಯಸ್ ಮಟ್ಟಕ್ಕೆ ಇಳಿಯುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಹಿಮವು ಟೆಕ್ಸಾಸ್‌ನಿಂದ ನ್ಯೂ ಇಂಗ್ಲೆಂಡ್‌ವರೆಗೆ 2,000 ಮೈಲುಗಳಿಗಿಂತ ಹೆಚ್ಚು ವ್ಯಾಪ್ತಿಯಲ್ಲಿ ಹರಡುವ ಸಾಧ್ಯತೆ ಇದೆ. ಒಕ್ಲಹೋಮಾ ರಾಜ್ಯದ ಹಲವು ಭಾಗಗಳಲ್ಲಿ ನಿರಂತರವಾಗಿ ಹಿಮಪಾತ ಹಾಗೂ ಮಳೆಯಾಗಿದೆ. ವಾಷಿಂಗ್ಟನ್‌ನಿಂದ ನ್ಯೂಯಾರ್ಕ್ ಹಾಗೂ ಬೋಸ್ಟನ್‌ವರೆಗೆ ವ್ಯಾಪಿಸಿರುವ ಪ್ರದೇಶಗಳಲ್ಲಿ ಒಂದು ಅಡಿಯಷ್ಟು ಹಿಮಪಾತ ಸಂಭವಿಸುವ ಸಾಧ್ಯತೆ ಇದೆ. ಲೂಯಿಸ್ ಕೌಂಟಿ ಹಾಗೂ ನ್ಯೂಯಾರ್ಕ್‌ನಕೆಲವೆಡೆ ತಾಪಮಾನ ಮೈನಸ್ 34 ಡಿಗ್ರಿ ಸೆಲ್ಸಿಯಸ್ ಮಟ್ಟಕ್ಕೆ ಇಳಿದಿದೆ ಎಂದು ಇಲಾಖೆ ತಿಳಿಸಿದೆ.


