Menu

ಭೀಕರ ಮಳೆ, ಭೂಕುಸಿತ: ವೈಷ್ಣೋದೇವಿ ಯಾತ್ರಾ ಮಾರ್ಗದಲ್ಲಿ ಮೃತರ ಸಂಖ್ಯೆ 35ಕ್ಕೆ ಏರಿಕೆ

ಜಮ್ಮುವಿನಲ್ಲಿ ಧಾರಾಕಾರ ಮಳೆಯಿಂದಾಗಿ ಹಲವು ಪ್ರದೇಶಗಳಲ್ಲಿ ಭೂ ಕುಸಿತವಾಗಿದ್ದು, ಕತ್ರಾ ಜಿಲ್ಲೆಯಲ್ಲಿರುವ ವೈಷ್ಣೋದೇವಿ ಯಾತ್ರಾ ರಸ್ತೆ ಮಾರ್ಗದಲ್ಲಿ ಭೂಕುಸಿತಕ್ಕೆ ಮೃತಪಟ್ಟವರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. ಕತ್ರಾದ ಅರ್ಧಕುವರಿ ಸಮೀಪ ಅವಶೇಷಗಳಿಂದ ಮೂವತ್ತೈದು ಮೃತದೇಹಗಳನ್ನು ಈವರೆಗೆ ಹೊರತೆಗೆಯಲಾಗಿದೆ ಎಂದು ವೈಷ್ಣೋದೇವಿ ದೇವಾಲಯ ಮಂಡಳಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

22 ಮೃತದೇಹಗಳ ಗುರುತು ಪತ್ತೆ ಮಾಡಲಾಗಿದೆ. ಬಹುತೇಕರು ಉತ್ತರ ಪ್ರದೇಶ, ದೆಹಲಿ, ರಾಜಸ್ಥಾನ ಮತ್ತು ಮಧ್ಯ ಪ್ರದೇಶದವರು. ಕಾನೂನು ಪ್ರಕ್ರಿಯೆ ಮುಗಿಸಿ ಮೃತದೇಹಗಳ ಹಸ್ತಾಂತರ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದುರಂತದ ಬಳಿಕ ವೈಷ್ಣೋದೇವಿ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಹಳೆಯ ಮಾರ್ಗವನ್ನು ದುರಸ್ತಿಗೊಳಿಸಲಾಗಿದೆ.

ಭಾರತೀಯ ಸೇನೆ, ಪೊಲೀಸರು, ಎಸ್​ಡಿಆರ್​ಎಫ್​ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಸ್ಥಳಕ್ಕೆ ಜೆಸಿಬಿ ಯಂತ್ರಗಳನ್ನು ತರಲು ಸಾಧ್ಯವಾಗದೆ ಸಂಪೂರ್ಣ ಮಾನವ ಕಾರ್ಯಾಚರಣೆ ನಡೆಯುತ್ತಿದೆ. ನಿರಂತರ ಮಳೆಯಿಂದ ಉಂಟಾದ ಭೂಕುಸಿತದಲ್ಲಿ 20 ಜನರು ಗಾಯಗೊಂಡಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಸುರಿದ ಭೀಕರ ಮಳೆ 52 ವರ್ಷದ ದಾಖಲೆ ಮುರಿದಿದೆ. 24 ಗಂಟೆಯಲ್ಲಿ 296 ಮಿ.ಮೀ ಪ್ರಮಾಣದ ಮಳೆಯಾಗಿದೆ. 1973ರ ಆಗಸ್ಟ್​ 9ರಂದು ಜಮ್ಮುವಿನಲ್ಲಿ 272.6 ಮಿ.ಮೀ ಮಳೆಯಾಗಿತ್ತು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ನಿರಂತರ ಮಳೆಯಿಂದಾಗಿ ಸೂರ್ಯ ಪುತ್ರಿ ತಾವಿ ನದಿ ಉಕ್ಕಿ ಹರಿಯುತ್ತಿದ್ದು, ಜಮ್ಮು ನಿವಾಸಿಗಳಲ್ಲಿ ಆತಂಕ ಉಂಟಾಗಿದೆ. ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ನೂರಾರು ಮನೆ ಮತ್ತು ಕೃಷಿ ಭೂಮಿ ಮುಳುಗಿದೆ. ಅನೇಕ ಕಟ್ಟಡಗಳು ಹಾಗೂ ಜಾನುವಾರುಗಳು ಕೊಚ್ಚಿ ಹೋಗಿವೆ, ಒಂದೇ ದಿನ 6,000 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಮಳೆಯಿಂದಾಗಿ ಪೀರ್ಖೋ ಪ್ರದೇಶ ಹೆಚ್ಚು ಹಾನಿಗೊಂಡಿದೆ. ವಾಹನಗಳು ಹೂತು ಹೋಗಿವೆ. ಬಂಡೆಗಳು ಮತ್ತು ಮರಗಳು ಧರೆಗುರುಳಿವೆ.

ಉಧಮ್‌ಪುರ-ರಾಂಬನ್ ಪ್ರದೇಶದಲ್ಲಿ ಭಾರೀ ಮಳೆ, ಭೂಕುಸಿತಗಳಿಂದಾಗಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್​ ಆಗಿದೆ. ಇದರ ಪರಿಣಾಮವಾಗಿ, 500ರಿಂದ 600ಕ್ಕೂ ಹೆಚ್ಚು ವಾಹನಗಳು ಮಾರ್ಗಮಧ್ಯೆಯೇ ಸಿಲುಕಿವೆ.

ಜಖೇನಿ ಮತ್ತು ಚೆನಾನಿ ನಡುವಿನ ಹಲವು ಸ್ಥಳಗಳಲ್ಲಿ ಹಾನಿ ಸಂಭವಿಸಿರುವುದರಿಂದ ಉಧಂಪುರದ ಜಖೇನಿಯಿಂದ ಶ್ರೀನಗರ ಕಡೆಗೆ ಸಾಗುವ ಹೆದ್ದಾರಿಯನ್ನು ಮುಚ್ಚಲಾಗಿದೆ. ಜಮ್ಮುವಿನ ನಾಗ್ರೋಟಾದಿಂದ ರಿಯಾಸಿ, ಚೆನಾನಿ, ಪತ್ನಿಟಾಪ್, ದೋಡಾ, ರಾಂಬನ್, ಬನಿಹಾಲ್, ಶ್ರೀನಗರ ಕಡೆಗೆ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

Related Posts

Leave a Reply

Your email address will not be published. Required fields are marked *