ಕೊಡಗು, ಕರಾವಳಿ, ಮಲೆನಾಡು ಭಾಗಗಳಲ್ಲಿ ನಿರಂತರ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಗುಡ್ಡ ಕುಸಿತ, ಮನೆ ಕುಸಿತ, ಮರಗಳ ಉರುಳುವಿಕೆ ಅನಾಹುತಗಳು ವರದಿಯಾಗಿವೆ. ಕೊಡಗಿನ ತ್ರಿವೇಣಿ ಸಂಗಮ, ಶೃಂಗೇರಿಯ ಕಪ್ಪೆಶಂಕರ ದೇಗುಲ ಮತ್ತು ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯ ಜಲಾವೃತಗೊಂಡಿವೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರಕ್ಕೆ ತೊಡಕು ಉಂಟಾಗಿದೆ. ಮುಳ್ಳಯ್ಯನಗಿರಿ, ದತ್ತಪೀಠಕ್ಕೆ ತೆರೆಳುವ ಮಾರ್ಗ ಮಧ್ಯೆ ರ ಕೈಮರ ಚೆಕ್ ಪೋಸ್ಟ್ ಬಳಿ ರಸ್ತೆಗೆ ಮರ ಬಿದ್ದು ವಿದ್ಯುತ್ ಕಂಬ ಹಾನಿಗೊಂಡಿದೆ, ಕೆಲ ಕಾಲ ಇಲ್ಲಿ ಟ್ರಾಫಿಕ್ ಜಾಮ್ ಆಗಿದೆ.
ಮಂಡ್ಯದಲ್ಲಿ ಕೆಆರ್‌ಎಸ್‌ಗೆ 23,000 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಸುರಕ್ಷತೆಗಾಗಿ ೬0,000 ಕ್ಯೂಸೆಕ್ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿಯ ದೇವಿಮನೆ ಘಾಟಿಯಲ್ಲಿ ಗುಡ್ಡ 50 ಅಡಿ ಕುಸಿದಿದ್ದು, ಸಂಪರ್ಕ ವ್ಯತ್ಯಯಗೊಂಡಿದೆ. ಆರ್‌ಪೇಟೆ ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಮಳೆಯಾಗಿ 15 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿವೆ.
ಕೆ.ಆರ್.ಪೇಟೆಯ ಈಚಲಗುಡ್ಡೆ ಕಾವಲ್ ಗ್ರಾಮದಲ್ಲಿ ವಿದ್ಯುತ್ ಕಂಬಗಳ ಮೇಲೆ ಮರ ಬಿದ್ದು ಹಾನಿಗೊಂಡಿವೆ. ಹಾಸನದ ಅರಕಲಗೂಡು ತಾಲೂಕಿನ ಕೆಸವತ್ತೂರು ಗ್ರಾಮದಲ್ಲಿ ಹತ್ತಕ್ಕೂ ಹೆಚ್ಚು ಲೈಟ್ ಕಂಬಗಳು ನೆಲಕ್ಕುರುಳಿವೆ. ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟ ಜಲಾವೃತಗೊಂಡಿವೆ. ಕುಮಾರಧಾರ ಬಳಿಯ ದರ್ಪಣ ತೀರ್ಥ ಹೊಳೆ ಸೇತುವೆ ಮುಳುಗಡೆಯಾಗಿ ವಾಹನ ಸಂಚಾರಕ್ಕೆಸಮಸ್ಯೆಯಾಗಿದೆ.
ಚಿಕ್ಕಮಗಳೂರಿನ ಮಲೆನಾಡು ಪ್ರದೇಶದಲ್ಲಿ ,ಪಶ್ಚಿಮ ಘಟ್ಟಗಳಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ತುಂಗಾ ಮತ್ತು ಭದ್ರಾ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ. ಶೃಂಗೇರಿಯಲ್ಲಿ ನೆರೆ ಆತಂಕ ಸೃಷ್ಟಿಯಾಗಿದ್ದು, ಶೃಂಗೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಗುಡ್ಡ ಕುಸಿತದಿಂದ ವಾಹನ ಸಂಚಾರ ಬಂದ್ ಆಗಿದೆ. ಸ್ತೆಯ ಇಕ್ಕೆಲಗಳಲ್ಲಿ ಗುಡ್ಡ ಕುಸಿತ ತಡೆಗಟ್ಟಲು ಇರಿಸಲಾಗಿದ್ದ ಕಬ್ಬಿಣದ ತಡೆಗೋಡೆಗಳೂ ಕುಸಿತಕ್ಕೆ ಒಳಗಾಗಿವೆ.
ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದ್ದು, ಮುಂಜಾಗ್ರತೆಯಾಗಿ ಶಾಲೆಗಳು ಮತ್ತು ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ. ಶೃಂಗೇರಿಯಲ್ಲಿ ತುಂಗಾ ನದಿಯ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದ್ದು, ಶಾರದಾ ಮಠಕ್ಕೆ ಸಂಪರ್ಕಿಸುವ ಮತ್ತೊಂದು ಮಾರ್ಗವೂ ಜಲಾವೃತವಾಗಿದೆ. ಜಿಲ್ಲಾಡಳಿತವು ಸ್ಥಳೀಯರಿಗೆ ಮತ್ತು ಪ್ರವಾಸಿಗರಿಗೆ ಮುಂಜಾಗ್ರತೆ ವಹಿಸುವಂತೆ ಸೂಚನೆ ನೀಡಿದೆ.
ಕಳಸ ಭಾಗದಲ್ಲಿ ಭಾರೀ ಮಳೆಯಿಂದ ಭದ್ರಾ ನದಿಯೂ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಕಳಸ-ಹೊರನಾಡು ರಸ್ತೆಯ ಹೆಬ್ಬೊಲೆಯ ಸೇತುವೆ ಜಲಾವೃತವಾದೆ. ಕೊಪ್ಪ, ಎನ್.ಆರ್.ಪುರ, ಮತ್ತು ಮೂಡಿಗೆರೆ ತಾಲೂಕುಗಳಲ್ಲಿಯೂ ಭಾರೀ ಮಳೆಯಿಂದಾಗಿ ರಸ್ತೆಗಳು ಮತ್ತು ಕೃಷಿಭೂಮಿಗಳು ಜಲಾವೃತವಾಗಿವೆ.
ಚಿಕ್ಕಮಗಳೂರು ದೇವದಾನ ಗ್ರಾಮದಲ್ಲಿ ಬಿರುಗಾಳಿ ಸಹಿತ ಮಳೆಯಿಂದ ಮರವೊಂದು ಮನೆಯ ಮೇಲೆ ಬಿದ್ದು ಮನೆ ಸಂಪೂರ್ಣ ಜಖಂಗೊಂಡಿದೆ. ಶೌರ್ಯ ವಿಪತ್ತು ನಿರ್ವಹಣಾ ತಂಡವು ಮರವನ್ನು ತೆರವುಗೊಳಿಸಿದೆ. ಜಿಲ್ಲೆಯಾದ್ಯಂತ ಮರಗಳು ಧರೆಗುರುಳಿ, ವಿದ್ಯುತ್ ಕಂಬಗಳು ಕುಸಿದಿರುವುದರಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕೆಲವು ಪ್ರದೇಶಗಳಲ್ಲಿ ಕೃಷಿಭೂಮಿಗಳು ಮತ್ತು ತೋಟಗಳಿಗೆ ಹಾನಿಯಾಗಿದೆ.