ರಾಜ್ಯದಲ್ಲಿ ಏಳು ದಿನ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ, ಬೆಂಗಳೂರಿನಲ್ಲಿ ಕೆಲವು ಕಡೆ ಸೆಪ್ಟೆಂಬರ್ 4 ರ ವರೆಗೆ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ತಜ್ಞ ಸಿ ಎಸ್ ಪಾಟೀಲ್ ಮಾಹಿತಿ ನೀಡಿದ್ದಾರೆ.
ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದ್ದು, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮತ್ತು ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಸಣ್ಣ ಪ್ರಮಾಣದ ಮಳೆಯಾಗಲಿದೆ. ಬಂಗಾಳ ಉಪ ಸಾಗರದ ಒರಿಸ್ಸಾದ ಕರಾವಳಿಯಲ್ಲಿ ಚಂಡಮಾರುತ ಹಿನ್ನೆಲೆ ವಾಯುಭಾರ ಕುಸಿತ ಉಂಟಾಗಲಿದೆ, ಕರಾವಳಿ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 6 ರ ವರೆಗೆ ವ್ಯಾಪಕ ಮಳೆ ಬೀಳಲಿದೆ.
ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಈ ಜಿಲ್ಲೆಗಳಿಗೆ ಸೆಪ್ಟೆಂಬರ್ 2 ರಂದು ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಈಗಾಗಲೇ ಕೆಲವು ದಿನಗಳಿಂದ ಮಳೆ ಸುರಿಯುತ್ತಲೇ ಇದೆ. ಇನ್ನು ಕೆಲವು ದಿನ ಮಳೆಯೊಂದಿಗೆ ಬಿರುಸಿನ ಗಾಳಿಯೂ ಬೀಸಲಿದ್ದು, ಜನರು ಸಾಕಷ್ಟು ಮುಂಜಾಗ್ರತೆ ವಹಿಸಬೇಕಿದೆ.