ಬಿಸಿಲಿನ ಝಳದಿಂದ ಕಂಗೆಟ್ಟಿದ್ದ ಹುಬ್ಬಳ್ಳಿ-ಧಾರವಾಡದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಧಾರವಾಡದಲ್ಲಿ ಸತತ ಒಂದು ಗಂಟೆ ಧಾರಾಕಾರವಾಗಿ ಮಳೆಯಾಗಿದ್ದು, ರೈತರ ಮೊಗದಲ್ಲಿ ನಗು ತರಿಸಿದೆ. ಮುಂಗಾರು ಬಿತ್ತನೆಗೆ ಭೂಮಿ ಸಜ್ಜು ಮಾಡಿಕೊಳ್ಳಲು ಈ ಮಳೆ ಸಹಕಾರಿಐಆಗಿದೆ. ನಾಲ್ಕು ದಿನಗಳ ಹಿಂದೆ ಈ ಪ್ರದೇಶದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗಿತ್ತು.
ಧಾರಾಕಾರ ಮಳೆಯೊಂದಿಗೆ ಸಿಡಿಲು ಅಬ್ಬರಿಸಿದ್ದು, ಮೇಕೆ ಮೇಯಿಸಲು ಹೋಗಿದ್ದ ವೃದ್ಧರೊಬ ಬರು ಸಿಡಿಲಿಗೆ ಬಲಿಯಾಗಿದ್ದಾರೆ. ಧಾರವಾಡ ತಾಲೂಕಿನ ಮುಗದ ಗ್ರಾಮದ ಹೊಲದಲ್ಲಿ ಈ ದುರಂತ ನಡೆದಿದೆ. ರಸೂಲಸಾಬ್ ಚಾಂದವಾಲೆ (62) ಮೃತಪಟ್ಟವರು. ಸಂಜೆ ಮೇಕೆ ಮೇಯಿಸಿಕೊಂಡು ವಾಪಸ್ ಮುಗದ ಗ್ರಾಮಕ್ಕೆ ಬರುವಾಗ ಸಿಡಿಲು ಬಡಿದಿದೆ.
ಹುಬ್ಬಳ್ಳಿಯ ನವನಗರ, ವಿದ್ಯಾನಗರ, ದೇಶಪಾಂಡೆ ನಗರದಲ್ಲಿ ಗುಡುಗು ಸಿಡಿಲು ಸಹಿತ ಮಳೆಯಾಗಿದೆ. ಕೇಶ್ವಾಪುರದ ಕೆಲವು ಕಡೆ ಆಲಿಕಲ್ಲು ಸಹಿತ ಮಳೆಯಾಗಿದ್ದು, ಮಳೆ ಕಾರಣ ಹುಬ್ಬಳ್ಳಿ ನಗರದಲ್ಲಿ ವಿದ್ಯುತ್ ಕಡಿತಗೊಂಡಿದೆ. ಸತತ ಎರಡು ಗಂಟೆ ಸುರಿದ ಭಾರಿ ಮಳೆಗೆ ಚರಂಡಿ ತುಂಬಿ ಕೊಳಚೆ ನೀರು ಮುಖ್ಯ ರಸ್ತೆಗೆ ಹರಿದಿದೆ. ಮುಖ್ಯ ರಸ್ತೆಯಲ್ಲಿ ಸಂಚಾರ ವ್ಯತ್ಯಯಗೊಂಡಿದೆ.