ದೆಹಲಿಯಲ್ಲಿ ಮಳೆಯ ಆರ್ಭಟ ತೀವ್ರಗೊಂಡಿದ್ದು, ನಗರದ ಪ್ರಮುಖ ಭಾಗಗಳು ಜಲಾವೃತಗೊಂಡಿವೆ. ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.
ಮಳೆಯಿಂದಾಗಿ ನಗರದಲ್ಲಿ ಶಾಖ ಮತ್ತು ಹೆಚ್ಚಿನ ಮಾಲಿನ್ಯ ಮಟ್ಟವನ್ನು ತಗ್ಗಿದೆ. ಇಂಡಿಯಾ ಗೇಟ್, ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಮಂಡಿ ಹೌಸ್, ತುಘಲಕ್ ರಸ್ತೆ ಮತ್ತು ನಗರದ ಹಲವಾರು ಭಾಗಗಳು ನೀರಿನಿಂದ ಆವರಿಸಿಕೊಂಡಿವೆ.
ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿಯೂ ಬಹಳಷ್ಟು ಮಳೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ದೆಹಲಿಗೆ ಆರೆಂಜ್ ಅಲರ್ಟ್ ಘೋಷಿಸಿತ್ತು. ಮಳೆ ನೀರು ನಿಂತಿದ್ದರಿಂದ ವಿವಿಧ ಸ್ಥಳಗಳಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ.
ಮಹಾಮಾಯ ಮೇಲ್ಸೇತುವೆ ಕೆಳಗಿರುವ ರಸ್ತೆ ಮತ್ತು ಅಂಬೇಡ್ಕರ್ ಪಾರ್ಕ್ ಬಳಿ ರಸ್ತೆ ನೀರಿನಲ್ಲಿ ಮುಳುಗಿದಂತಾಗಿದೆ. ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇದ್ದು, ಆಹ್ಲಾದಕರ ಹವಾಮಾನದ ಅನುಭವವಾಗುವಂತಿದೆ. ದಕ್ಷಿಣ ದೆಹಲಿ, ಆಗ್ನೇಯ ದೆಹಲಿ, ಮಧ್ಯ ದೆಹಲಿ, ರಾಷ್ಟ್ರೀಯ ಹೆದ್ದಾರಿ 8, ದೆಹಲಿ-ಜೈಪುರ ಮಾರ್ಗ, ಐಟಿಒ ಮತ್ತು ಏಮ್ಸ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ನೀರು ನಿಂತು ಸಂಚಾರ ದುಸ್ತರವಾಗಿದೆ.