ರೇಣುಕಾಸ್ವಾಮಿ ಕೊಲೆ ಪ್ರಕರಣದ ದೋಷಿಯಾಗಿ ಜೈಲಿನಲ್ಲಿರುವ ನಟ ದರ್ಶನ್ ಹೆಚ್ಚುವರಿ ಹಾಸಿಗೆ ದಿಂಬು ನೀಡದ ವಿಚಾರಕ್ಕೆ ಸಂಬಂಧಪಟ್ಟಂತೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ಬೆಂಗಳೂರಿನ 57ನೇ ಸೆಷನ್ಸ್ ಕೋರ್ಟ್‌ನಲ್ಲಿ ನಡೆದಿದ್ದು, ಅಕ್ಟೋಬರ್ 9ಕ್ಕೆ ಆದೇಶ ಕಾಯ್ದಿರಿಸಲಾಗಿದೆ.
ಜೈಲಿನಲ್ಲಿ ತಮಗೆ ಬೇಕಾಗಿರುವ ವಸ್ತುಗಳನ್ನು ನೀಡದ ಜೈಲಿನ ಅಧಿಕಾರಿಗಳ ವಿರುದ್ಧ ದರ್ಶನ್ ಅರ್ಜಿ ಸಲ್ಲಿಸಿದ್ದು, ವಿಚಾರಣೆ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿದೆ. ದರ್ಶನ್ ಪರ ವಕೀಲ ಹಾಗೂ ಸರ್ಕಾರದ ಪರ ವಕೀಲರ ವಾದ ಪ್ರತಿವಾದದ ಬಳಿಕ ಕೋರ್ಟ್ ಅಕ್ಟೋಬರ್ 9ಕ್ಕೆ ಆದೇಶ ಕಾಯ್ದಿರಿಸಿದೆ.
ಜೈಲು ಅಧೀಕ್ಷಕ ಸುರೇಶ್ ಖುದ್ದು ಹಾಜರಾಗಿ ನ್ಯಾಯಾಲಯಕ್ಕೆ ಸಂಪೂರ್ಣ ವರದಿ ಸಲ್ಲಿಸಿದರು. ಕ್ವಾರಂಟೈನ್ ಸೆಲ್‌ನಿಂದ ಬ್ಯಾರಕ್‌ಗೆ ಸ್ಥಳಾಂತರಿಸಲು ದರ್ಶನ್ ಕೋರಿದ್ದಾರೆ. ವಾಕ್ ಮಾಡಲು ಕಡಿಮೆ ಸಮಯ ಜಾಗ ನೀಡಿದ್ದಾರೆ. ಜೈಲಾಧಿಕಾರಿಗಳು ಕೋರ್ಟ್ ಆದೇಶ ಪಾಲಿಸಿಲ್ಲ ಎಂದು ಆರೋಪಿಸಿದ್ದಾರೆ.
ಜೈಲಿನಲ್ಲಿ ಹೆಚ್ಚುವರಿ ಹಾಸಿಗೆ ದಿಂಬು ನೀಡದ ಆರೋಪಕ್ಕೆ ಸಂಬಂಧಪಟ್ಟಂತೆ ಜೈಲು ಅಧಿಕಾರಿಗಳ ಪರವಾಗಿ ಎಸ್‍ಪಿಪಿ ಪ್ರಸನ್ನಕುಮಾರ್ ವಾದ ಆರಂಭಿಸಿದರು. ಜೈಲು ಕೈಪಿಡಿಯಂತೆ ಕ್ರಮ ಕೈಗೊಳ್ಳಲಾಗಿದೆ. ಟೆಲಿಫೋನ್ ವೀಡಿಯೊ ಕಾನ್ಫರೆನ್ಸ್ ವ್ಯವಸ್ಥೆ ಮಾಡಲಾಗಿದೆ. ಚಾದರ್, ಹಾಸಿಗೆ ದಿಂಬು ಕೊಡಲಾಗಿದೆ. ಓಡಾಡಲು ಎಷ್ಟು ಜಾಗವಿದೆಯೋ ಅಷ್ಟು ಅವಕಾಶ ಕೊಟ್ಟಿದ್ದೇವೆ ಎಂದು ವಾದಿಸಿದರು.
ದರ್ಶನ್ ಪರ ವಕೀಲ ಸುನಿಲ್ ವಾದ ಮಂಡಿಸಿದರು. ಜೈಲಾಧಿಕಾರಿಗಳಿಗೆ ಕೋರ್ಟ್ ನಿರ್ದೇಶನ ಅರ್ಥವಾಗಿಲ್ಲ. ಕಾರ್ಪೆಟ್ ಚಾದರ್ ಮೊದಲೇ ಕೊಟ್ಟಿದ್ದರು. ಕಂಬಳಿ ಮಾತ್ರ ಕೋರ್ಟ್ ಆದೇಶದ ಬಳಿಕ ಕೊಟ್ಟಿದ್ದಾರೆ. ಬ್ಯಾರಕ್ ಒಳಗೆ ಮಾತ್ರ ಅರ್ಧ ಗಂಟೆ ಓಡಾಡಲು ಬಿಟ್ಟಿದ್ದಾರೆ. ಹೊರಗಡೆ ಓಡಾಡಲು ಬಿಟ್ಟಿಲ್ಲ ಎಂದು ವಾದಿಸಿದರು.
ಜೈಲು ಅಧಿಕಾರಿಗಳಿಗೆ ಆರೋಪಿಗಳ ರಕ್ಷಣೆಯ ಹೊಣೆ ಇರುವುದನ್ನು ಪರಿಗಣಿಸಬೇಕಲ್ಲವೇ ಎಂದು ಜಡ್ಜ್ ಕೇಳಿದರು. ಕಾನೂನು ಸುವ್ಯವಸ್ಥೆ ಕಾಪಾಡುವುದು ಪೊಲೀಸರ ಹೊಣೆ. ಅದನ್ನು ಗಮನದಲ್ಲಿ ಇಟ್ಟುಕೊಂಡು ಅವರು ಕ್ರಮ ಕೈಗೊಳ್ಳಬಹುದು ಎಂದು ತಿಳಿಸಿದರು.
ದರ್ಶನ್‌ರನ್ನು ಕ್ವಾರಂಟೈನ್ ಸೆಲ್‌ನಲ್ಲಿ ಇಟ್ಟಿದ್ದಾರೆ. ಉಗ್ರರನ್ನು ಇರಿಸುವ ಸೆಲ್‌ನಲ್ಲಿ ಇಟ್ಟಿದ್ದಾರೆ. ಯಾವ ಕೈದಿಗೆ ಯಾವ ಸೆಲ್ ನೀಡಬೇಕು ಎಂದು ಕೈಪಿಡಿಯಲ್ಲಿದೆ. ಕೇಂದ್ರ ಸರ್ಕಾರದ ಜೈಲು ಕೈಪಿಡಿಯನ್ನು ಜೈಲಾಧಿಕಾರಿಗಳು ಪಾಲಿಸುತ್ತಿಲ್ಲ. ಉತ್ತಮ ಆಹಾರ ಹಾಸಿಗೆ ನೀರಿಗೆ ಅವಕಾಶ ಇರಬೇಕು. ಹೊರಜಗತ್ತಿನ ಸಂಪರ್ಕವೂ ಕೈದಿಗಳಿಗಿರಬೇಕು. ಇದನ್ನು ಅಧಿಕಾರಿಗಳು ಪಾಲಿಸುತ್ತಿಲ್ಲ ಎಂದು ದರ್ಶನ್ ಪರ ವಕೀಲ ಸುನಿಲ್ ವಾದಿಸಿದರು.
ಕ್ವಾರಂಟೈನ್ ಸೆಲ್ ಕೂಡ ಜೈಲಿನ ಒಂದು ಭಾಗವೇ. ಜೈಲಿನ ಆಡಳಿತಕ್ಕೆ ಅನುಕೂಲವಾಗುವಂತೆ ಕೈದಿಯನ್ನು ಸೆಲ್‌ನಲ್ಲಿ ಇರಿಸಲಾಗುತ್ತದೆ. ದರ್ಶನ್ ವಿಚಾರಣಾ ಕೈದಿ. ಜೈಲಿನಲ್ಲಿ ಎಲ್ಲಿ ಬೇಕಾದರೂ ಇಡಬಹುದು ಎಂದು ಜೈಲು ಅಧೀಕ್ಷಕರ ಪರವಾಗಿ ಪ್ರಸನ್ನ ಕುಮಾರ್ ವಾದ ಮಂಡಿಸಿದರು.