Menu

ಕೋಲಾರ, ಚಿಕ್ಕಬಳ್ಳಾಪುರಕ್ಕೆ ಎತ್ತಿನಹೊಳೆ ನೀರು ಬರಲ್ಲ, ಕೃಷ್ಣಾ ನದಿ ನೀರಿಗೆ ಪ್ರಯತ್ನವೆಂದ ಕುಮಾರಸ್ವಾಮಿ

hd kumarswamy

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೃಷ್ಣಾ ನದಿ ನೀರು ತರುವ ಬಗ್ಗೆ ಶೀಘ್ರದಲ್ಲಿಯೇ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತೇನೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಕೋಲಾರ ನಗರದಲ್ಲಿ ಖಾಸಗಿ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಜಿಲ್ಲೆಗಳಿಗೆ ನದಿಯ ನೀರು ಕೊಡುತ್ತೇವೆಂದು ಹೇಳಿ ಎತ್ತಿನಹೊಳೆ ಯೋಜನೆ ಮಾಡಿದರು. ಆದರೆ, ಬೆಂಗಳೂರಿನ ಕೊಚ್ಚೆ ನೀರು ಕೊಟ್ಟರು. ಮೂರನೇ ಹಂತದ ಶುದ್ಧೀಕರಣ ಮಾಡಿ ಎಂದರೂ ಮಾಡುತ್ತಿಲ್ಲ. ಇಂತಹ ಸಂದರ್ಭದಲ್ಲಿ ಕೃಷ್ಣಾ ನದಿಯ ನೀರು ಬಿಟ್ಟರೆ ನಮಗೆ ಬೇರೆ ದಾರಿ ಇಲ್ಲ ಎಂದರು.

ಈ ಜಿಲ್ಲೆಗೆ ಕೃಷ್ಣಾ ನೀರು ತರುವ ಬಗ್ಗೆ ಸಂಸದ ಮಲ್ಲೇಶ್ ಬಾಬು ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕೆ ನನ್ನ ಬೆಂಬಲವೂ ಇದೆ. ಆಂಧ್ರದ ಮುಖ್ಯಮಂತ್ರಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಕೆಲಸ ಸಾಧಿಸಬೇಕಿದೆ. ಅದಕ್ಕಾಗಿ ಅವರನ್ನು‌ ಭೇಟಿ ಮಾಡು ತ್ತೇನೆ. ಅವರ ರಾಜ್ಯದ ಜನರ ಭಾವನೆಗಳಿಗೆ ಧಕ್ಕೆ ಆಗದ ರೀತಿಯಲ್ಲಿ ಅವರ ಸಹಕಾರ ತೆಗೆದುಕೊಳ್ಳುವ ಕೆಲಸ‌ ಮಾಡುತ್ತೇವೆ.  ಮಲ್ಲೇಶ್ ಬಾಬು ಅವರನ್ನು ಗೆಲ್ಲಿಸಿದ ಕೋಲಾರ ಜನರ ಋಣ ನಮ್ಮ‌ಮೇಲಿದೆ. ಅದನ್ನು ತೀರಿಸುವ ಕೆಲಸ ಮಾಡುವ ಪ್ರಯತ್ನ ಮಾಡುತ್ತೇವ ಎಂದು ಹೇಳಿದರು.

2014ರಲ್ಲಿ ಚಿಕ್ಕಬಳ್ಳಾಪುರದಲ್ಲಿ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ಮಾಡಿದ ದಿನವೇ ನಾನು ಕೋಲಾರದಲ್ಲಿದ್ದೆ. ಒಂದೆರಡು ವರ್ಷಗಳಲ್ಲಿ ನೀರು ಬರಲ್ಲ, ಬಂದರೆ ತಲೆ ಕೂದಲು ಬೋಳಿಸಿಕೊಳ್ಳುವೆ ಎಂದಿದ್ದೆ.ನನ್ನ ತಲೆಯಲ್ಲಿ ಕೂದಲು ಹೋಯಿತೇ ಹೊರತು ಈ ಜಿಲ್ಲೆಗಳಿಗೆ ನೀರು ಹರಿಯಲಿಲ್ಲ ಎಂದು ಲೇವಡಿ ಮಾಡಿದರು.

ಅವತ್ತಿನ ಕಾಂಗ್ರೆಸ್ ಸರ್ಕಾರ ನೀರು ಕೊಡುವುದಾಗಿ ಹೇಳಿ‌ ಹತ್ತು ವರ್ಷ ಆಗಿದೆ. ಆ ಯೋಜನೆಯ ಹೆಸರಿನಲ್ಲಿ ಎಷ್ಟೆಲ್ಲಾ ಲೂಟಿ ಆಗಿದೆ ಎನ್ನುವುದು ಗೊತ್ತಿದೆ. ಸಿಎಜಿ ವರದಿಯಲ್ಲಿ ಇದೆಲ್ಲವೂ ಇದೆ. ಅನರ್ಹ ಗುತ್ತಿಗೆದಾರರಿಗೆ ಕಾಮಗಾರಿ ಕೊಟ್ಟಿದ್ದಾರೆ, ಕಳಪೆ ಕಾಮಗಾರಿ ಆಗಿ ಹಣ ದುರುಪಯೋಗ ಆಗಿದೆ ಎಂದು ವರದಿಯಲ್ಲಿ ಉಲ್ಲೇಖವಿದೆ. ಈಗ ₹30 ಸಾವಿರ ಕೋಟಿಗೆ ಎತ್ತಿನಹೊಳೆ ಯೋಜನಾ ವೆಚ್ಚ ತಲುಪಿದೆ ಎಂದರು.

ನದಿಯ ನೀರು ಕೊಡುತ್ತೇವೆ ಎಂದವರು ಕೊಚ್ಚೆ ನೀರು ಕೊಟ್ಟು ಮೋಸ ಮಾಡಿದರು. ಈ ಜಿಲ್ಲೆಗಳ ಜನ ಕಾಂಗ್ರೆಸ್ಸಿಗರಿಗೆ ಏನು ದ್ರೋಹ ಮಾಡಿದ್ದರು? ಭಾರತೀಯ ವಿಜ್ಞಾನ ಸಂಸ್ಥೆ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ವರದಿ ನೀಡಿವೆ. ಅವುಗಳನ್ನು ನೋಡಿದರೆ ಈ ಜಿಲ್ಲೆಗಳಿಗೆ ಆಗಿರುವ ಹಾನಿ ಏನೆಂಬುದು ಗೊತ್ತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೊದಲು ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಬೆಳೆಯುತ್ತಿದ್ದ ತರಕಾರಿಗಳನ್ನು ದೇಶ ವಿದೇಶಗಳಲ್ಲಿ ಪೈಪೋಟಿಗೆ ಬಿದ್ದು ಖರೀದಿ ಮಾಡುತ್ತಿದ್ದರು. ಇವತ್ತು ಈ ಭಾಗದ ತರಕಾರಿಯನ್ನು ಕೇಳುವವರೇ ಇಲ್ಲ. ಈಗ ನೋಡಿದರೆ 2027ಕ್ಕೆ ಎತ್ತಿನಹೊಳೆ ನೀರು ಕೊಡುತ್ತೇವೆ ಎಂದು ಸಬೂಬು ಹೇಳುತ್ತಿದ್ದಾರೆ. ಎತ್ತಿನಹೊಳೆಯ ಯಂತ್ರೋಪಕರಣಗಳು ಈಗಾಗಲೇ ತುಕ್ಕು ಹಿಡಿಯುತ್ತಿವೆ. ಕೋಲಾರ, ಚಿಕ್ಕಬಳ್ಳಾಪುರ ಜನರೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ. ದುರಂತವೆಂದರೆ ಯರಗೋಳ್ ಜಲಾಶಯಕ್ಕೆ ಕೂಡ ಕೆ.ಸಿ ವ್ಯಾಲಿಯ ಕೊಚ್ಚೆ ನೀರು ಹರಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮಾತೆತ್ತಿದರೆ ಕೇಂದ್ರ ಸರ್ಕಾರದ ಬೆರಳು ಮಾಡುತ್ತಾರೆ. ರಾಜ್ಯದ ಕೆಲಸಗಳಿಗೆ ಸಂಬಂಧಿಸಿ ಈವರೆಗೂ ಸಿಎಂ, ಡಿಸಿಎಂ ಸೇರಿ ಯಾವೊಬ್ಬ ಸಚಿವರು ನಮ್ಮನ್ನು ಭೇಟಿ ಮಾಡಿಲ್ಲ.  ನಮ್ಮ ಪ್ರಯತ್ನದಿಂದ ಇತಿಹಾಸದಲ್ಲಿ ಮೊದಲ ಬಾರಿಗೆ ಕೆಂದ್ರ ಸರ್ಕಾರ ಮಾವಿಗೆ ಬೆಂಬಲ‌ ಬೆಲೆ‌ ನೀಡಿದೆ. ತಂಬಾಕು ಬೆಳೆಗಾರರ ಹಿತರಕ್ಷಣೆ ಮಾಡಿದ್ದೇವೆ. ತೆಂಗು ಬೆಳೆಗಾರರ ನೆರವಿಗೆ ಧಾವಿಸಿದ್ದೇವೆ ಎಂದು ಹೇಳಿದರು. ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ನೋಟಿಸ್ ನೀಡಿರುವುದಕ್ಕೂ ನನಗೂ ಯಾವ ಸಂಬಂಧವೂ ಇಲ್ಲ ಎಂದು  ಸ್ಪಷ್ಟಪಡಿಸಿದರು.

ಬಿಡದಿಯಲ್ಲಿ ಈ ಸರ್ಕಾರ ನನಗೂ ನೋಟಿಸ್ ಕೊಟ್ಟು ಕೊಡಬಾರದ ಕಾಟ ನೀಡುತ್ತಿದೆ. ಅದಕ್ಕೆ ರಮೇಶ್ ಕುಮಾರ್ ಕಾರಣ ಎಂದು ಹೇಳಿದರೆ ಆಗುತ್ತದೆಯೇ? ನನ್ನ ವಿಚಾರಕ್ಕೆ ಎಸ್‌ಐಟಿ ರಚನೆ ಮಾಡಿದ್ದಾರೆ. ಅವರ ವಿಚಾರಕ್ಕೆ ಯಾಕೆ ರಚನೆ ಮಾಡಿಲ್ಲ ಏಕೆ? ಕೋರ್ಟುಗಳು ಇವೆ, ಹೋರಾಟ ಮಾಡಲಿ, ನಾನು ಕೂಡ ಅದನ್ನೇ ಮಾಡುತ್ತಿದ್ದೇನೆ. ಅದನ್ನು ಬಿಟ್ಟು ಅವರ ವೈಯುಕ್ತಿಕವಾಗಿ ಇರುವ ಸಮಸ್ಯೆಯಿಂದಾಗಿ ಕೃಷಿ‌ ಕುರಿತು ಏನೇನೋ‌ ಹೇಳುತ್ತಿದ್ದಾರೆ. ಕಾನೂನುನ್ನು ಜಯಿಸುವಷ್ಟು ಬುದ್ಧಿವಂತ ಅವರು. ನಿಮಗೆ ಸಮಸ್ಯೆ ಬಂದಿದ್ದಾಗ ಅದು ಅರ್ಥ ಆಗಿದೆ ಎಂದು ತಿರುಗೇಟು ನೀಡಿದರು.

ಸೀಟು ಹಂಚಿಕೆ ಮಾತುಕತೆ ನಡೆದಿಲ್ಲ: ಮಂಡ್ಯ ಅಥವ ರಾಜ್ಯದ ಯಾವುದೇ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಸೀಟು ಕುರಿತು ಮಾತುಕತೆ ಆಗಿಲ್ಲ. ಅದಕ್ಕೆ ಇನ್ನೂ ಸಮಯ ಇದೆ. ಬಿಜೆಪಿಯೊಂದಿಗೆ ಪರಸ್ಪರ ಮಾತಿನ ಮೂಲಕ ಎಲ್ಲವನ್ನು ತೀರ್ಮಾನ ಕೈಗೊಳ್ಳುತ್ತೇವೆ. ನಮ್ಮ ಮೊದಲ ಆದ್ಯತೆ ಜಿಲ್ಲಾ ಪಂಚಾಯಿತಿ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆ ಗಮನ ನೀಡಿದ್ದೇವೆ ಎಂದು ಕೇಂದ್ರ ಸಚಿವರು ಹೇಳಿದರು.

ಏನೇ ಆರೋಪ ಮಾಡಿದರೂ ದಾಖಲೆ ಕೊಡಿ ಎಂದು ರಾಜ್ಯ ಕಾಂಗ್ರೆಸ್‌ ಸರ್ಕಾರದವರು ಕೇಳುತ್ತಿದ್ದಾರೆ. ಅಬಕಾರಿ ಇಲಾಖೆಯಲ್ಲಿ ದುಡ್ಡು ತೆಗೆದುಕೊಂಡಿರುವುದಕ್ಕೆ ದಾಖಲೆ ಇದೆ. ಅದಕ್ಕಿಂತ ದಾಖಲೇ ಬೇಕೇ ಎಂದು ಪ್ರಶ್ನಿಸಿದರು.  ಇದು ದೊಡ್ಡು ಹೊಡೆಯುವ ಕಾರ್ಯಕ್ರಮ ಎಂಬುದಾಗಿ ಹೊಸದಾಗಿ ಸುಮಾರು 700 ಮದ್ಯದಂಗಡಿಗೆ (ಸಿಎಲ್‌–7) ಪರವಾನಗಿ ಕೊಡುವುದಾಗಿ ಈ ಸರ್ಕಾರ ಘೋಷಣೆ ಮಾಡಿದ ದಿನವೇ ನಾನು ಹೇಳಿದ್ದೆ ಎಂದರು.

Related Posts

Leave a Reply

Your email address will not be published. Required fields are marked *