ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಕುಟುಂಬದ ವಿರುದ್ಧ ಭೂ ಒತ್ತುವರಿ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಬಿಡದಿಯ ಕೇತುಗಾನಹಳ್ಳಿ ಗ್ರಾಮದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಗೆ ಸಿದ್ದತೆ ನಡೆಸಿದ್ದಾರೆ.
ಕೇತಗಾನಹಳ್ಳಿಯ ಸರ್ವೆ 7,8,9,10,16,17 ಮತ್ತು 79ರಲ್ಲಿ ಕುಮಾರಸ್ವಾಮಿ ಸೇರಿದಂತೆ ಇತರರು ಒತ್ತುವರಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈಗಾಗಲೇ ಅಧಿಕಾರಿಗಳು ಸರ್ವೆ ಕಾರ್ಯ ನಡೆಸಿದ್ದು, ಒತ್ತುವರಿಯಾದ ಭೂಮಿ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಂಗಳವಾರದಿಂದ ಕುಮಾರಸ್ವಾಮಿ ಅವರ ತೋಟದ ಮನೆ ಒಳಗೆ ಹೋದ ಅಧಿಕಾರಿಗಳ ತಂಡ, ಕೆಲವೆಡೆ ಮಾರ್ಕಿಂಗ್ ಮಾಡಿ ಕಲ್ಲು ನೆಡುವ ಕೆಲಸ ನಡೆಸಿತ್ತು. ತೋಟದ ಸುತ್ತ ಕೂಡ ಮಾರ್ಕಿಂಗ್ ಮಾಡಿ ಕಲ್ಲು ನೆಡಲಾಗಿದೆ.
ಮಾರ್ಕಿಂಗ್ ಹಾಗೂ ಕಲ್ಲು ನೆಡುವ ಕೆಲಸ ಮುಗಿದಿದ್ದು, ನಂತರ ಒತ್ತುವರಿ ಸಂಬಂಧಿಸಿದಂತೆ ಕೇಂದ್ರ ಸಚಿವರಿಗೆ ನೋಟಿಸ್ ಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ನೋಟಿಸ್ ಬಳಿಕ ಕೇಂದ್ರ ಸಚಿವರು ಯಾವ ಉತ್ತರ ಕೊಡಲಿದ್ದಾರೆಂಬುದನ್ನು ಕಾದು ನೋಡಬೇಕಿದೆ.
”ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಸೇರಿದಂತೆ ಇತರರು ಒತ್ತುವರಿ ಮಾಡಿರುವ ಆರೋಪ ಕೇಳಿ ಬಂದಿದೆ. ಎಲ್ಲೆಲ್ಲಿ, ಯಾರೆಲ್ಲ ಅತಿಕ್ರಮಣ ಮಾಡಿದ್ದಾರೋ ಅದನ್ನು ತೆರವುಗೊಳಿಸುವ ಕಾರ್ಯ ನಡೆಸಲಾಗುತ್ತದೆ. ಕೋರ್ಟ್ನಲ್ಲಿ ಕೇಸ್ ಇರುವುದರಿಂದ ಎಲ್ಲ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು” ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಮಾಹಿತಿ ನೀಡಿದರು.
ಒತ್ತುವರಿ ತೆರವು ಕಾರ್ಯಾಚರಣೆಗೆ ಬಗ್ಗೆ ಅಸಮಾಧಾನ ಹೊರಹಾಕಿರುವ ಕುಮಾರಸ್ವಾಮಿ ಅವರು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜಕೀಯವಾಗಿ ಮತ್ತು ಕಾನೂನಾತ್ಮಕವಾಗಿ ಹೋರಾಟ ನಡೆಸುವುದಾಗಿಯೂ ಹೇಳಿದ್ದಾರೆ.