Menu

ಹಾಲು ಮತ್ತು ವಿದ್ಯುತ್ ದರ ಏರಿಕೆಗೆ ಸರ್ಕಾರದ ವಿರುದ್ಧ ಹೆಚ್‌ಡಿಕೆ ಆಕ್ರೋಶ

ಹಾಲು ಮತ್ತು ವಿದ್ಯುತ್ ದರ ಏರಿಕೆ ಮಾಡಿರುವ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಕರ್ನಾಟಕ ರಾಜ್ಯ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿ ಕಪಿಮುಷ್ಟಿಯಲ್ಲಿದೆ ಎಂದು ಹೇಳಿದ್ದಾರೆ.

ಹೊಸದಿಲ್ಲಿಯಲ್ಲಿ ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಕುಮಾರಸ್ವಾಮಿ, “ಎರಡು ವರ್ಷಗಳ ಸರಣಿ ಸುಲಿಗೆ! ಯುಗಾದಿ ಹಬ್ಬಕ್ಕೆ ಬೆಲೆ ಏರಿಕೆ ಹೋಳಿಗೆ!” ಎಂದು ಟೀಕಿಸಿದ್ದಾರೆ. ರಾಜ್ಯದಲ್ಲಿ 3ನೇ ಸಲ ಹಾಲಿನ ದರ ಏರಿಕೆ ಮಾಡಲಾಗಿದೆ. 2023 ಆಗಸ್ಟ್ ತಿಂಗಳಲ್ಲಿ ₹3, 2024 ಜೂನ್ ತಿಂಗಳಿನಲ್ಲಿ ₹2 ಹಾಗೂ 2025 ಮಾರ್ಚ್, ಈಗ ₹4 ಏರಿಕೆ ಮಾಡಲಾಗಿದೆ. ವಿದ್ಯುತ್ ಕೂಡ ದುಬಾರಿ ಆಗಿದೆ. ಈಗ ಪ್ರತೀ ಯೂನಿಟ್‌ಗೆ ₹36 ಪೈಸೆ ಹೆಚ್ಚಳ. ಮಹಾದೇವಪ್ಪ ನಿಗೂ ಶಾಕ್‌! ಕಾಕಾ ಪಾಟೀಲಗೂ ಶಾಕ್‌! ಎಂದು ಲೇವಡಿ ಮಾಡಿದ್ದಾರೆ.

ಹಾಲು, ವಿದ್ಯುತ್ ದರ ಏರಿಕೆ ಖಂಡನೀಯ. ನೆಪ ರೈತರದು, ಲಾಭ ಕೆಎಂಎಫ್‌ಗೆ, ಸರ್ಕಾರ ಕಂಪನಿ ಆಡಳಿತ ನಡೆಸುತ್ತಿದೆ. ಮೊಸರು ದರ ₹4 ಏರಿಕೆ ಮಾಡಿದ್ದೀರಿ. ಈ ಹಣ ಏನು ಮಾಡುತ್ತೀರಿ, ರೈತರಿಗೆ ವರ್ಗಾಯಿಸುತ್ತೀರೋ ಅಥವಾ ಕೆಎಂಎಫ್ ತಾನೇ ಉಳಿಸಿಕೊಳ್ಳಲಿದೆಯೋ ಸ್ಪಷ್ಟಪಡಿಸಿ ಎಂದು ಒತ್ತಾಯ ಮಾಡಿದ್ದಾರೆ.

ದರ ಏರಿಕೆ, ತೆರಿಗೆ ಹೇರಿಕೆ ಸರಕಾರ, ಇದು ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿ. ಸುಲಿಗೆಯಷ್ಟೇ ನಿತ್ಯಕೃತ್ಯ. ಕರ್ನಾಟಕ ರಾಜ್ಯ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿ ಕಪಿಮುಷ್ಟಿಯಲ್ಲಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *