ಹಾವೇರಿಯಲ್ಲಿ ಮೊಬೈಲ್ ಅತಿಯಾಗಿ ಬಳಸುತ್ತಿರುವುದಕ್ಕೆ ಆಕ್ಷೇಪಿಸಿ ತಾಯಿ ಬುದ್ಧಿವಾದ ಹೇಳಿದ್ದಕ್ಕೆ ಸಿಟ್ಟಿಗೆದ್ದ ಅಪ್ರಾಪ್ತ ವಯಸ್ಕ ಅಕ್ಕತಂಗಿಯರಿಬ್ಬರು ಮನೆ ಬಿಟ್ಟು ತೆರಳಿದ್ದ ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು ಪುಣೆಯ ರೈಲ್ವೆ ಸ್ಟೇಷನ್‌ನಲ್ಲಿ ಬಾಲಕಿಯರಿಬ್ಬರನ್ನು ಪತ್ತೆ ಹಚ್ಚಿ ಸುರಕ್ಷಿತವಾಗಿ ಮನೆಯವರಿಗೆ ಒಪ್ಪಿಸಿದ್ದಾರೆ.
ಮುನಿಸಿಕೊಂಡ ಬಾಲಕಿಯರು ಮನೆಯಿಂದ ತೆರಳುವ ತೀರ್ಮಾನಕ್ಕೆ ಬಂದು ಸಹಪಾಠಿಗಳೊಂದಿಗೆ ನಾವು ಹುಬ್ಬಳ್ಳಿಗೆ ಹೋಗುತ್ತೇವೆ ಎಂದು ಹೇಳಿ ಕೇವಲ ಒಂದೆರಡು ಬಟ್ಟೆಗಳನ್ನು ಬ್ಯಾಗ್‌ನಲ್ಲಿ ತುಂಬಿಕೊಂಡು ಮನೆಯಿಂದ ಹೊರಟಿದ್ದರು. ಬಳಿಕ ಹಾವೇರಿಯಿಂದ ದಾದರ್ ಎಕ್ಸ್‌ಪ್ರೆಸ್ ರೈಲಿನ ಮೂಲಕ ಪುಣೆಗೆ ಪ್ರಯಾಣಿಸಿದ್ದರು.
ಬಾಲಕಿಯರ ನಾಪತ್ತೆಯ ವಿಷಯ ತಿಳಿದ ತಕ್ಷಣ ಹಾವೇರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸ್ ಇಲಾಖೆಯು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಸಿಸಿಟಿವಿ ಕ್ಯಾಮರಾಗಳ ದೃಶ್ಯಾವಳಿ ಪರಿಶೀಲಿಸಿ ಬಾಲಕಿಯರ ಶಾಲಾ ಸಹಪಾಠಿಗಳು ಹಾಗೂ ಶಿಕ್ಷಕರಿಂದ ಮಾಹಿತಿ ಸಂಗ್ರಹಿಸಿದ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದರು.
ಪುಣೆ ರೈಲ್ವೆ ಸ್ಟೇಷನ್‌ನಲ್ಲಿ ದಿನನಿತ್ಯದ ಪರಿಶೀಲನೆಯ ವೇಳೆ ಪುಣೆ ಪೊಲೀಸರು ಬಾಲಕಿಯರನ್ನು ಪತ್ತೆಹಚ್ಚಿದ್ದಾರೆ. ವಿಚಾರಣೆಯ ಸಂದರ್ಭದಲ್ಲಿ ಬಾಲಕಿಯರು ತಾಯಿಯ ಬುದ್ಧಿಮಾತಿಗೆ ಮುನಿಸಿಕೊಂಡು ಮನೆ ತೊರೆದಿರುವುದು ದೃಢಪಟ್ಟಿತ್ತು. ಪುಣೆ ಪೊಲೀಸರು ತಕ್ಷಣವೇ ಬಾಲಕಿಯರನ್ನು ರಕ್ಷಿಸಿ ಹಾವೇರಿ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಬಾಲಕಿಯರ ಪೋಷಕರು ಹಾವೇರಿ ಪೊಲೀಸರೊಂದಿಗೆ ಪುಣೆಗೆ ತೆರಳಿ, ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ಕರೆತಂದಿದ್ದಾರೆ.